ಮುದ್ದೇಬಿಹಾಳ : ರಾಜ್ಯ ಸರ್ಕಾರ ಒಳಮೀಸಲಾತಿ ಕಲ್ಪಿಸಲು ಆರಂಭಿಸಿರುವ ಜಾತಿ ಗಣತಿಗೆ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಾದಿಗ ಸಮಾಜದ ತಾಲ್ಲೂಕು ಅಧ್ಯಕ್ಷ ತಿಪ್ಪಣ್ಣ ಮಾದರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುದ್ದೇಬಿಹಾಳ ತಾಲ್ಲೂಕಿನ ಕೆಲವು ಹಳ್ಳಿಗಳಿಗೆ ಈವರೆಗೂ ಅಧಿಕಾರಿಗಳು ಸಮೀಕ್ಷೆಗೆ ಹೋಗಿಲ್ಲ. ತಹಸೀಲ್ದಾರ್‌ರು, ಬಿಇಒ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಳ್ಳಿಗಳಲ್ಲಿ ಸಂಚರಿಸಿ ಗಣತಿ ಕಾರ್ಯವನ್ನು ಪರಿಶೀಲನೆ ನಡೆಸಬೇಕು. ಮಹತ್ವಾಕಾಂಕ್ಷಿ ಇಟ್ಟುಕೊಂಡು ಜಾರಿಗೊಳಿಸಿರುವ ಈ ಸಮೀಕ್ಷೆಗೆ ತಾಲ್ಲೂಕಿನಲ್ಲಿ ನಿರ್ಲಕ್ಷ್ಯ ತೋರಿಸುತ್ತಿದ್ದು ಪರಿಶಿಷ್ಟ ಸಮಾಜಗಳಿಗೆ ಅನ್ಯಾಯ ಆಗುವ ಆತಂಕ ಮೂಡಿದೆ ಎಂದು ತಿಳಿಸಿದ್ದಾರೆ.
ಕೂಡಲೇ ಗಣತಿ ಕಾರ್ಯವನ್ನು ಚುರುಕುಗೊಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಹಾದಿ ತುಳಿಯುವುದು ಅನಿವಾರ್ಯವಾಗಲಿದೆ ಎಂದು ತಿಳಿಸಿದ್ದಾರೆ.