
ಮುದ್ದೇಬಿಹಾಳ : ಕೌಟುಂಬಿಕ ಹಿನ್ನೆಲೆಯ ದಂಪತಿಗಳಿಬ್ಬರ ಪ್ರಕರಣವನ್ನು ಇಲ್ಲಿನ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಪರಿಹರಿಸಲಾಗಿದ್ದು ನ್ಯಾಯಾಲಯ ಇಬ್ಬರನ್ನು ಒಂದುಗೂಡಿಸಿ ಸಹಬಾಳ್ವೆಗೆ ಅವಕಾಶ ಮಾಡಿಕೊಟ್ಟಿದೆ.

ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಶನಿವಾರ ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತನ್ನು ಏರ್ಪಡಿಸಲಾಗಿತ್ತು.ಲೋಕ ಅದಾಲತ್‌ನಲ್ಲಿ ಸಿವಿಲ್ ನ್ಯಾಯಾಲಯದ ಒಂದು ಕೌಟುಂಬಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಗಂಡ ಹೆಂಡತಿಯನ್ನು ಒಂದುಗೂಡಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಯಿತು. ಬ.ಬಾಗೇವಾಡಿ ತಾಲ್ಲೂಕು ಉಪ್ಪಲದಿನ್ನಿ ತಾಂಡಾದ ನಿವಾಸಿ ನಾಮದೇವ ಬಾಬು ರಾಠೋಡ ಹಾಗೂ ಕೋಳೂರು ತಾಂಡಾದ ಅಶ್ವಿನಿ ನಾಮದೇವ ರಾಠೋಡ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಅಶ್ವಿನಿ ಅವರು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಜೀವನಾಂಶ ಕೊಡಿಸುವಂತೆ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಸಿವಿಲ್ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಲಗಿಡದ ಅವರು ಪರಿಹರಿಸಿ ದಂಪತಿಗಳಿಬ್ಬರನ್ನು ಒಂದುಗೂಡಿಸಿದರು. ಅಲ್ಲದೇ ನ್ಯಾಯಾಲಯದಲ್ಲಿ ದಂಪತಿಗಳಿಬ್ಬರು ಪರಸ್ಪರ ಹೂವಿನ ಮಾಲೆ ಹಾಕಿ ಸಿಹಿ ತಿನ್ನಿಸಿ ಪ್ರಕರಣ ಇತ್ಯರ್ಥಕ್ಕೆ ಸಹಕಾರ ನೀಡಿದರು.ಉಭಯ ಕಕ್ಷಿದಾರರ ಪರ ವಕೀಲರಾದ ಎಸ್.ಎಸ್.ಮಾಲಗತ್ತಿ, ಎಸ್.ಸಿ.ಹಿರೇಮಠ ಇದ್ದರು.
ಇನ್ನುಳಿದಂತೆ ಲೋಕ ಅದಾಲತ್‌ನಲ್ಲಿ ಎರಡು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು 7771 ಬಾಕಿ ಇರುವ ಪ್ರಕರಣಗಳಲ್ಲಿ 2370 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.ಒಟ್ಟು 1979 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.
ಪೂರ್ವದಾವೆ ಪ್ರಕರಣಗಳಲ್ಲಿ ಒಟ್ಟು 1866 ಪ್ರಕರಣಗಳಲ್ಲಿ 897 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು.
ಲೋಕ ಅದಾಲತ್‌ನಲ್ಲಿ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟೀಮನಿ, ಸಂಧಾನಕಾರರಾಗಿ ವಕೀಲರಾದ ಶೋಭಾ ಪಾಟೀಲ, ರೇಣುಕಾ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ತಾಲೂಕಾ ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕರು, ನ್ಯಾಯಾಲಯ ಸಿಬ್ಬಂದಿ, ಹಿರಿಯ , ಕಿರಿಯ ವಕೀಲರು ಪಾಲ್ಗೊಂಡಿದ್ದರು.