ಮುದ್ದೇಬಿಹಾಳ : ಕುಲಶಾಸ್ತ್ರಿಯ ಅಧ್ಯಯನದ ಕೊರತೆ, ಬಲಗೈ ಸಮುದಾಯದ ವಿರುದ್ಧ ದ್ವೇಷಪೂರಿತ ನಿರ್ಧಾರವಾಗಿರುವ ಒಳಮೀಸಲಾತಿ ಕೊಡುವ ಹಿನ್ನೆಲೆಯಲ್ಲಿ ನ್ಯಾ. ನಾಗಮೋಹನದಾಸ್ ನೀಡಿರುವ ವರದಿಯನ್ನು ಸರ್ಕಾರ ಅಂಗೀಕರಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ತಾಲ್ಲೂಕು ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಅಂಬೇಡ್ಕರ್ ಸರ್ಕಲ್‌ದಿಂದ ಆರಂಭಗೊಂಡ ಪ್ರತಿಭಟನೆ ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತ, ತಹಸೀಲ್ದಾರ್ ಕಚೇರಿಗೆ ಆಗಮಿಸಿತು. ಮುಖಂಡ ಹರೀಶ ನಾಟೀಕಾರ, ಚೆನ್ನಪ್ಪ ವಿಜಯಕರ್ ಮಾತನಾಡಿ, ನಗರ ಮತ್ತು ಗ್ರಾಮ ಪಂಚಾಯತ್‌ನಲ್ಲಿ ಬೂತ ತೆರೆಯದೇ ಮನೆಗಳಿಗೆ ಚೀಟಿ ಅಚಿಟಿಸುವ ಮೂಲಕ ಸಮೀಕ್ಷೆ ಪೂರ್ಣವಾಗಿದೆ ಎಂದು ತಪ್ಪು ವರದಿ ನೀಡಲಾಗಿದ್ದು ಇದರಲ್ಲಿ 1.47 ಕೋಟಿ ಬದಲು 1.16 ಕೋಟಿ ಜನರ ವರದಿ ಸಲ್ಲಿಕೆಯಾಗಿದೆ. ಅದರಲ್ಲಿ ಆಯೋಗವು 1.05 ಕೋಟಿ ಮಾತ್ರ ಸರ್ವೆ ಮಾಡಿದೆ. 40 ಲಕ್ಷ ಜನರು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ ಎಂದು ದೂರಿದರು.
ಕೆಲವು ಬಲಗೈ ಜಾತಿಗಳನ್ನು ತಪ್ಪಾಗಿ ಪ್ರವರ್ಗ-ಎ ಗೆ ಸೇರಿಸಲಾಗಿದ್ದು ಬಲಗೈ ಸಮುದಾಯದ ಜನಸಂಖ್ಯೆಯನ್ನು ಒಡೆದು ತೋರಿಸಲಾಗಿದೆ ಎಂದು ದೂರಿದರು. ಅವೈಜ್ಞಾನಿಕವಾಗಿರುವ ನಾಗಮೋಹನದಾಸ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು. ಹೊಲೆಯ ಹಾಗೂ ಮಾದಿಗ ಸಮುದಾಯ ಒಂದೆ ಜೋಡೆತ್ತು ಇದ್ದಂತೆ ಇಬ್ಬರು ಸಮುದಾಯದವರಿಗೂ ಸಮಾನ ನ್ಯಾಯ ದೊರಕಿಸಿಕೊಡುವ ಕಾರ್ಯ ವರದಿಯಿಂದಾಗಬೇಕಿತ್ತು ಎಂದು ಹೇಳಿದರು.
ತಹಸೀಲ್ದಾರ್ ಕೀರ್ತಿ ಚಾಲಕ್ ಮನವಿ ಪತ್ರ ಸ್ವೀಕರಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಪ್ರೊ. ಪಿ. ಎಚ್. ಉಪ್ಪಲದಿನ್ನಿ, ಮುಖಂಡರಾದ ಸಿದ್ದು ಕಟ್ಟಿಮನಿ, ದೌರ್ಜನ್ಯ ತಡೆ ಸಮೀತಿ ಸದಸ್ಯ ಮಲ್ಲು ತಳವಾರ, ಎಸ್. ಆರ್. ಕಟ್ಟೀಮನಿ, ಅಶೋಕ ಪಾದಗಟ್ಟಿ, ಶಿವಪುತ್ರ ಅಜಮನಿ, ಪ್ರಕಾಶ್ ಚಲವಾದಿ ಮಾತನಾಡಿದರು.
ಪುರಸಭೆ ಸದಸ್ಯ ಶಿವು ಶಿವಪೂರ, ಚಲವಾದಿ ಮಹಾಸಭೆ ತಾಲೂಕು ಅಧ್ಯಕ್ಷ ರೇವಣಪ್ಪ ಹರಿಜನ, ಯಲ್ಲಪ್ಪ ಚಲವಾದಿ, ಮಹಾಂತೇಶ ಚಲವಾದಿ, ಕೆ.ಎಂ.ಇಬ್ರಾಹಿಂಪೂರ, ಶ್ರೀಕಾಂತ ಚಲವಾದಿ, ಶರಣು ಚಲವಾದಿ, ಸಂಗು ಚಲವಾದಿ, ಸಿದ್ದು ಚಲವಾದಿ, ಮಂಜುನಾಥ ಬಸರಕೋಡ, ಪ್ರಶಾಂತ ಕಾಳೆ, ಮಂಜುನಾಥ್ ಕಟ್ಟಿಮನಿ, ದೇವರಾಜ್ ಹಂಗರಗಿ, ಎಚ್. ಆರ್. ಗಂಜಾಳ ಇದ್ದರು.