

ವಿಶೇಷ ವರದಿ-ಶಂಕರ ಹೆಬ್ಬಾಳ
ಮುದ್ದೇಬಿಹಾಳ : ತೀವ್ರ ಕುತೂಹಲ ಕೆರಳಿಸಿದ್ದ ಮುದ್ದೇಬಿಹಾಳ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕೃಷಿ ಇಲಾಖೆಯ ಅಧಿಕಾರಿ ಅರವಿಂದ ಹೂಗಾರ ಅವಿರೋಧ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029 ನೇ ಅವಧಿಗೆ ಮುದ್ದೇಬಿಹಾಳ ತಾಲೂಕಿನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಆರೋಗ್ಯ ಇಲಾಖೆಯಿಂದ ಆನಂದಗೌಡ ಬಿರಾದಾರ, ಕೃಷಿ ಇಲಾಖೆಯಿಂದ ಅರವಿಂದ ಹೂಗಾರ ಹಾಗೂ ಶಿಕ್ಷಣ ಇಲಾಖೆಯಿಂದ ಬಸನಗೌಡ ಮುದ್ನೂರ ನಾಮಪತ್ರ ಸಲ್ಲಿಸಿದ್ದರು.
ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು ಸೋಮವಾರ ಸಂಜೆಯವರೆಗೂ ನಡೆದ ಪ್ರಕ್ರಿಯೆಯಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ಬಸನಗೌಡ ಮುದ್ನೂರ ಹಾಗೂ ಆನಂದಗೌಡ ಬಿರಾದಾರ ಅವರಿಬ್ಬರು ಹೂಗಾರ ಅವರನ್ನು ಬೆಂಬಲಿಸಿ ತಮ್ಮ ನಾಮಪತ್ರಗಳನ್ನು ಹಿಂದಕ್ಕೆ ಪಡೆದ ಕಾರಣ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾಧಿಕಾರಿ ಎಸ್.ಆರ್.ಕಟ್ಟೀಮನಿ ತಿಳಿಸಿದರು.
ಸಹಾಯಕರಾಗಿ ಭೀಮಸಿ ಹೂಗಾರ ಕಾರ್ಯನಿರ್ವಹಿಸಿದರು.
ನೂತನ ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಅರವಿಂದ ಹೂಗಾರ ಅವರನ್ನು ಆರೋಗ್ಯ ಇಲಾಖೆಯ ನೌಕರರು ಅಭಿನಂದಿಸಿದರು.
—
ಸಂಘಟನಾ ಚತುರರು, ಸದ್ದಿಲ್ಲದೇ ನೌಕರರ ಹಿತ ಬಯುಸುವವರು :
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ತಾಲ್ಲೂಕು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಅರವಿಂದ ಹೂಗಾರ ಸಂಘಟನಾ ಚತುರರು.ಸರಳ ಜೀವಿಗಳು ಮೃದು ಸ್ವಭಾವದವರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಬ್ಯಾಂಕ್ ನ ಅಧ್ಯಕ್ಷರಾಗಿ, ಹಾಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷ ಎಂದರೆ ಹಾಲಿ ಶಾಸಕ ಅಪ್ಪಾಜಿ ನಾಡಗೌಡರ ಆಪ್ತರಾಗಿ, ಸಚಿವ ಎಚ್.ಕೆ.ಪಾಟೀಲ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಹೂಗಾರ ಅವರಿಗೆ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಸ್ಥಾನ ಅನಾಯಾಸವಾಗಿ ಲಭಿಸಿರುವುದು ಅವರ ಸಂಘಟನಾ ಚಾತುರ್ಯಕ್ಕೆ ದೊರೆತ ಮನ್ನಣೆ ಎಂದೇ ವಿಶ್ಲೇಷಿಸಲಾಗುತ್ತಿದೆ.
—
ಕೃಷಿ ಇಲಾಖೆಯ ಹಿಂದಿನ ಅಧಿಕಾರಿ ಎಸ್.ಆರ್.ಕಟ್ಟೀಮನಿ ಕಳೆದ 4 ಅವಧಿಯಲ್ಲಿ ತಾಲ್ಲೂಕು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು.ಇದೀಗ ಹೂಗಾರ ಅವರೂ ಅದೇ ಇಲಾಖೆಯಿಂದ ಬಂದಿದ್ದು ಅಧ್ಯಕ್ಷ ಸ್ಥಾನ ಕೃಷಿ ಇಲಾಖೆಯಲ್ಲಿ ಉಳಿದಂತಾಗಿದೆ.