ಕೊಡೇಕಲ್ : ‘ಬರೀ ಭ್ರಷ್ಟಾಚಾರ ಮರಾಯ, ನಾನು ಬ್ರಿಟಿಷ್ ಕಾಲದಲ್ಲಿ ಇಂತಹ ಅವ್ಯವಸ್ಥೆ ದುರಾಡಳಿತ ಕಂಡವನಲ್ಲ. ಆಧುನಿಕ ರಾಜಕೀಯ ಪರಿಸ್ಥಿತಿನೇ ಈಗಿದೇ ನನಗೆ ಈವರೆಗೂ ಸರಕಾರ ಯಾವ ಸೌಲಭ್ಯ ಕೊಡುತ್ತಿಲ್ಲ. ಸಮೀಪದ ಕೊಡೇಕಲ್ ಗ್ರಾಮದ ಸುಮಾರು 102 ವರ್ಷದ ನೇಕಾರಿಗೆ ವೃತ್ತಿಯ ಸಂಗಪ್ಪ ಮಂಟೆ ಅವರ ಮನದಾಳದ ಮಾತುಗಳಿವು.
ದೇಶಕ್ಕೆ ಹೆಸರಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಂತಾಗಿದೆ. ಎಲ್ಲೆಂದರಲ್ಲಿ ನಾವೇ ಎನ್ನುವ ಟಿವಿಯ ಮಾತು. ಹಣ ಕೊಟ್ಟರೆ ಅಧಿಕಾರಿಗಳಿಂದ ಕೆಲಸ ಸಾಧ್ಯ. ಇವೆಲ್ಲ ನನಗೆ ಬೇಡ ಎಂದು ನಾನು ನನ್ನ ವೃತ್ತಿಯಲ್ಲಿದ್ದೇನೆ ಎನ್ನುವ ಸಂಗಪ್ಪ ಮಂಟೆ ಅವರು ನೊಂದುಕೊಂಡು ಬದುಕು ಕಟ್ಟಿಕೊಂಡಿದ್ದು ಇಂದಿಗೂ ಇಳಿ ವಯಸ್ಸಿನಲ್ಲಿ ಜಗ್ಗದೇ ನೇಕಾರಿಕೆ ಮಾಡುತ್ತಿದ್ದುದು ಅಚ್ಚರಿ ಮೂಡಿಸಿದೆ.
ಆಸರೆ ಇಲ್ಲ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಮಂಟೆ ಅವರು ಸುಮಾರು 15 ವರ್ಷದವರಿದ್ದಾಗಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡಿದ್ದರು. ಮಂಟೆ ನೇರ ದಿಟ್ಟ ನಿರಂತರದ ವ್ಯಕ್ತಿತ್ವದವರು. ಸ್ವಾತಂತ್ರ್ಯಕ್ಕೋಸ್ಕರ ಪ್ರಾಣ ಬಿಟ್ಟವರಲ್ಲಿ ನಮ್ಮ ಭಾಗದಲ್ಲಿ ಅಂದಿನ ಗುಲಬರ್ಗಾ ಜೈಲಲ್ಲಿ 3 ತಿಂಗಳ ಕಾಲ ಕಳೆದಿದ್ದಾರೆ. ಬ್ರೀಟಿಷರು ಸಿಕ್ಕ ಸಿಕ್ಕವರ ಮನೆ ಮನೆಗಳಲ್ಲಿ ಹೊಕ್ಕು ಆಸ್ತಿ ಪಾಸ್ತಿ ಲೂಟಿ ಮಾಡಿದ್ದಲ್ಲದೇ ನಮ್ಮನ್ನು ಕಂಡು ಓಡಿ ಹೋದ ‘ರಜಾಕರು’ ಕ್ರೂರತನ ಮೆರೆದು ನಮ್ಮನ್ನು ಗುಲಾಮಗಿರಿ ಮಾಡಿಕೊಂಡಿದ್ದರು ಎನ್ನುತ್ತಾರೆ. ಆದರೂ ನಾ ಜಗ್ಗದೇ ಸುರುಪುರ ರಾಜಾ ವೆಂಕಟಪ್ಪ ನಾಯಕತ್ವದಲ್ಲಿ ಹೋರಾಡಿದ್ದು ನಿಜಕ್ಕೂ ಎದೆಗಾರಿಕೆಗೆ ಯಾವುದೂ ಸಾಟಿ ಇಲ್ಲದಂತೆ ಕತೆ ಬಿಚ್ಚಿಟ್ಟಿದ್ದಾರೆ.
ಕಾಗದ ಹಿಡಿದು ಅಲೆದಾಡಿದ್ದರು: ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಯವರನ್ನು ಭೇಟಿ ಮಾಡಿದ್ದ ಮಂಟೆ ಅವರು ಈಗಿನ ಅಧಿಕಾರಿಗಳು ರಾಜಕೀಯ ನಾಯಕರು ಅವರ ಮಾತುಗಳೇ ಬಂಡವಾಳ, ಯಾವದೇ ಸರಕಾರ ಅಥವಾ ಪಕ್ಷ ಒಳ್ಳೆಯದ್ದೇ ಇರುತ್ತೆ ಆದರೆ ಆಡಳಿತ ನಡೆಸೋರೇ ಭ್ರಷ್ಟರು, ಸ್ವತಂತ್ರ ಸಿಕ್ಕ ನಂತರ ಸೌಲಭ್ಯಗಳು ಸಿಗಬಹುದು ಎಂದು ದಾಖಲೆಗಳನ್ನು ಹಿಡಿದು ಅಲೆದಾಡಿದೆ. ಎಲ್ಲೆ ಹೋದರೂ ಲಂಚವೇ ಕೇಳಿ ಬಂದಿತು. ಈಗ ಮಾಸಿಕ 10 ಸಾವಿರ ಹೊರತು ಈವರೆಗೂ ಆಸರೆ ಮನೆ ಅಥವಾ ನನ್ನ ಕಾಯಕದ ನೇಕಾರಿಕೆಗೆ ಸಂಬಂಧಿಸಿದ ಯಾವದೇ ಸೌಲಭ್ಯ ಕೊಡಲು ಭ್ರಷ್ಟ ಅಧಿಕಾರಿಗಳು ಮುಂದೆ ಬರಲಿಲ್ಲ. ಒಂದು ಮನೆ ಕೇಳಿದರೆ 20 ಸಾವಿರ ಕೇಳುತ್ತಾರೆ ಯಾಕೆ ಹಣ ಕೊಡಬೇಕು ಎನ್ನುತ್ತಾರೆ ಹೋರಾಟಗಾರ ಸಂಗಪ್ಪ ಮಂಟೆ.
ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ