ಮುಂಬೈ: ಸೆಲ್ಫಿ ಹುಚ್ಚಿಗೆ ಯುವತಿಯೊಬ್ಬಳು ಸಾವಿನ ದವಡೆ ತೆರಳಿ ಪಾರಾಗಿ ಬಂದಿರುವ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆದಿದೆ.
ಮಳೆಯ ವಾತಾವರಣವನ್ನು ಆನಂದಿಸಲು ಯುವತಿ ತನ್ನ ಸ್ನೇಹಿತೆಯೊಂದಿಗೆ ಸತಾರಾ ಜಿಲ್ಲೆಯ ಉಂಗಾರ್ ರಸ್ತೆಯಲ್ಲಿ ಸಿಗುವ ಬೋರ್ನ್ ಘಾಟ್‌ಗೆ ಬಂದಿದ್ದಳು. ಇಲ್ಲಿ ಸೆಲ್ಸಿ ಕ್ಲಿಕ್ಕಿಸಲು ಮುಂದಾಗಿ ಆಯತಪ್ಪಿ ಸುಮಾರು 100 ಅಡಿ ಅಳಕ್ಕೆ ಬಿದ್ದಿದ್ದಾಳೆ.
ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಯುವತಿ ಬದುಕುಳಿದಿದ್ದಾಳೆ.
ಕೊನೆಗೆ ಆಕೆಯನ್ನು ಸ್ಥಳೀಯರು ಹಗ್ಗದ ಮೂಲಕ ರಕ್ಷಿಸಿದ್ದಾರೆ. ರಕ್ಷಣೆ ವೇಳೆ ಅಭಿ ಅಭಿ ಎಂದು ಜೋರಾಗಿ ಕೂಗಿದ್ದಾಳೆ. ಆಳವಾದ ಕಂದಕದಿಂದ ವ್ಯಕ್ತಿಯೊಬ್ಬ ರಕ್ಷಿಸುತ್ತಿರುವಾಗ ಆಕೆ ನೋವಿನಿಂದ ಅಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ವ್ಯಕ್ತಿಯೊಬ್ಬ ಹಗ್ಗದ ಮೂಲಕ ಕೆಳಗಿಳಿದು ಘಾಟ್‌ನ ಪೊದೆಗಳಲ್ಲಿ ಸಿಲುಕಿದ್ದ ಯುವತಿಯನ್ನು ಮೇಲಕ್ಕೆತ್ತಿದ್ದಾನೆ. ನಂತರ ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ವರದಿಯಾಗಿದೆ.