ಮುದ್ದೇಬಿಹಾಳ : ರಂಜಾನ್ ಮಾಸದಲ್ಲಿ ಈದ್ ಸೌಹಾರ್ದ ಕೂಟ ಏರ್ಪಡಿಸಿದಂತೆ ಈ ಬಾರಿ ಮನಿಯಾರ ಚಾರಿಟೇಬಲ್ ಟ್ರಸ್ಟ್ನಿಂದ ಶ್ರಾವಣ ಮಾಸದ ಸೌಹಾರ್ದ ಕೂಟ ಹಮ್ಮಿಕೊಂಡಿದ್ದೇವೆ ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಯೂಬ ಮನಿಯಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ತಾಳಿಕೋಟಿ, ಮುದ್ದೇಬಿಹಾಳ ಹಾಗೂ ನಾಲತವಾಡದಲ್ಲಿ ಅನೇಕ ವರ್ಷಗಳಿಂದ ಟ್ರಸ್ಟ್ನಿಂದ ವಿಧವೆಯರಿಗೆ ಪಿಂಚಣಿ, ಈದ್ ಕಿಟ್ ವಿತರಣೆ, ಬೀದಿಯಲ್ಲಿರುವ ನಿರಾಶ್ರಿತರಿಗೆ ಆಶ್ರಯ, ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಕಂಪ್ಯೂಟರ್ ತರಬೇತಿ ಮೊದಲಾದ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಕೈಗೊಂಡಿದ್ದು ಈ ಬಾರಿ ಶ್ರಾವಣ ಮಾಸದಲ್ಲಿ ಜಾತಿ, ಬೇಧ ಎನ್ನದೇ ಎಲ್ಲ ಧರ್ಮೀಯರಿಗೂ ಕಣ್ಣಿನ ಉಚಿತ ತಪಾಸಣಾ ಶಿಬಿರ, ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರಿಗೆ ಟ್ರಸ್ಟ್ನಿಂದಲೇ ಚಿಕಿತ್ಸೆಗೆ ಕಳಿಸಿಕೊಡುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಆ.9 ರಂದು ತಾಳಿಕೋಟೆಯಲ್ಲಿ, ಆ.10 ರಂದು ಮುದ್ದೇಬಿಹಾಳ ತಾಲ್ಲೂಕು, ನಾಲತವಾಡ ಪಟ್ಟಣದ ಜನತೆಗೆ ಆಯಾ ಭಾಗದಲ್ಲಿರುವ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ತಪಾಸಣಾ ಶಿಬಿರ ನಡೆಸಲಾಗುವುದು ಎಂದು ತಿಳಿಸಿದರು.
ಆ.11 ರಿಂದ 14ರವರೆಗೆ ವಿಜಯಪುರದ ಪ್ರಬುಗೌಡ ಲಿಂಗದಳ್ಳಿ ಅವರ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿದರು.
ಆ.20 ರಂದು ಬಿದರಕುಂದಿಯಲ್ಲಿರುವ ಮನಿಯಾರ ಅವರ ಶಾಲಾ ಕಟ್ಟಡದಲ್ಲಿ ಶ್ರಾವಣ ಮಾಸದ ಸೌಹಾರ್ದ ಕೂಟ ಕಾರ್ಯಕ್ರಮ ಜರುಗಲಿದ್ದು ಅಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದ ರೋಗಿಗಳಿಗೆ ಔಷಧಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು. ಆಸಕ್ತರು ಮೊ.8123277124 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್.ಮದರಿ ಮಾತನಾಡಿ, ಸಮಾಜ ಸೇವಕ ಅಯೂಬ ಮನಿಯಾರ ಕಳೆದ 12 ವರ್ಷಗಳಿಂದ ಯಾವುದೇ ಜಾತಿ, ಧರ್ಮ ಭೇದವಿಲ್ಲದೇ ಹಲವು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದಾರೆ. ಶ್ರಾವಣ ಮಾಸದಲ್ಲಿ ಸೌಹಾರ್ದ ಕೂಟ ಏರ್ಪಡಿಸಿರುವುದು ಅವರ ಸೌಹಾರ್ದತೆಯ ಗುಣಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹಾಜಿ ಮಹೆಬೂಬ ಹಡಲಗೇರಿ, ರೂಪಸಿಂಗ ಲೋಣಾರಿ, ದಾದಾ ಎತ್ತಿನಮನಿ, ಆಯ್. ಎಲ್. ಮಮದಾಪೂರ, ಫಯಾಜ ಸಾಸನೂರ, ಎಂ. ಎಲ್. ಗೋಲಂದಾಜ, ಅಫ್ತಾಬ ಮನಿಯಾರ, ಹಾಜಿಮಲಂಗ ಯಕೀನ ಇದ್ದರು.