ಕೊಪ್ಪಳ: ಜಿಲ್ಲೆಯ ಕೂಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ಶ್ರೀ ಚನ್ನಬಸವೇಶ್ವರ ಸ್ವಾಮೀಜಿ 16ನೇ ವರ್ಷದ ಮಹಾರಥೋತ್ಸವ ಸಾವಿರಾರೂ ಭಕ್ತರ ಸಮ್ಮುಖದಲ್ಲಿ ಗುರುವಾರ ಸಂಜೆ ಅದ್ಧೂರಿಯಾಗಿ ಜರುಗಿತು.
ಮಹಾರಥೋತ್ಸವದಲ್ಲಿ ದೇಗುಲದ ಮುಂಭಾಗ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇಗುಲದಿಂದ ಆರಂಭಗೊಂಡು ರಥೋತ್ಸವ ಸುಮಾರು 500 ಮೀಟರ್ ದೂರದಲ್ಲಿರುವ ಪಾದಗಟ್ಟಿಗೆ ತಲುಪಿ ಪುನಃ ದೇಗುಲದ ಬಳಿಗೆ ಭಕ್ತರ ಹರ್ಷೋದ್ಘಾರರೊಂದಿಗೆ ಎಳೆಯಲ್ಪಟ್ಟಿತು. ಈ ವೇಳೆ ಭಕ್ತರು ರಥಕ್ಕೆ ಉತ್ತತ್ತಿ ಅರ್ಪಿಸಿ, ರಥವನ್ನು ಎಳೆದು ಭಕ್ತಿ ಮೆರೆದರು.
ತದನಂತರ ಮಕ್ಕಳು ಆಟಿಕೆ ವಸ್ತುಗಳ ಕಡೆಗೆ ಆಕರ್ಷಿತರಾದರು. ಮಹಿಳೆಯರು, ಹೆಣ್ಣು ಮಕ್ಕಳು ಜಾತ್ರೆಯಲ್ಲಿ ವಿವಿಧ ವಸ್ತುಗಳನ್ನು ಖರೀದಿಸುವ ದೃಶ್ಯ ಕಂಡುಬಂತು.
ಮಹಾರಥೋತ್ಸವದ ಪ್ರಯುಕ್ತ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮಹಾ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ರಥೋತ್ಸವದ ನಂತರವೂ ಪ್ರಸಾದ ವಿತರಣೆಗೆ ಗ್ರಾಮಸ್ಥರು ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಡಿ ಬಾಸ್ ಬಿಡುಗಡೆಗಾಗಿ ಅಭಿಮಾನಿಗಳ ಪ್ರಾರ್ಥನೆ:
ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ ಅವರು ಆದಷ್ಟು ಬೇಗ ಬಿಡುಗಡೆ ಆಗಲಿದೆ ಎಂದು ಪ್ರಾರ್ಥಿಸಿ ಬನ್ನಿಕೊಪ್ಪ ಗ್ರಾಮದ ಡಿ ಬಾಸ್ ಅಭಿಮಾನಿಗಳು ರಥ ಬಿದಿಯಲ್ಲಿ ದರ್ಶನ್ ಭಾವಚಿತ್ರ ಕರ್ಪೂರದ ಆರತಿ ಬೆಳಗಿ ಚನ್ನಬಸವೇಶ್ವರ ಸ್ವಾಮೀಜಿಯಲ್ಲಿ ಪ್ರಾರ್ಥಿಸಿಕೊಂಡರು.
ಈ ವೇಳೆ ಬನ್ನಿಕೊಪ್ಪ ಗ್ರಾಮದ ದರ್ಶನ್ ಅಭಿಮಾನಿಗಳಾದ ಜಗ್ಗು ನಾಯಕ್, ಸೃಜನ್ ದೊಡ್ಡಮನಿ, ಸಮೀರ್ ಸೋಪುರ, ಮಂಜು ಚಲವಾದಿ, ಗಿರೀಶ್ ಚಂಡಿ, ಫಯಾಜ್ ಉಂಡೆಕಾರ, ಯಶವಂತ್ ಡಂಬಳ ಇದ್ದರು.