ಕೊಪ್ಪಳ: ರಾಜ್ಯದ ರಾಜಕಾರಣದಲ್ಲಿ ನವೆಂಬರರ್‌ನಲ್ಲಿ (November) ಕ್ರಾಂತಿ ನಡೆಯುತ್ತದೆ. ಆಗ ಸಿಎಂ ಸಿದ್ದರಾಮಯ್ಯ (Siddaramaiah) (Chief Minister) ಸ್ಥಾನದಿಂದ ಕೆಳಗೆ ಇಳಿಯುತ್ತಾರೆ ಎಂದು ವದಂತಿಗಳು ಜೋರಾಗಿರುವಾಗಲೇ ಸಿದ್ದರಾಮಯ್ಯ ಅವರು ಭಾರೀ ಸಂಚಲನ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ.
ಕೊಪ್ಪಳ ತಾಲೂಕಿನ ಬಸಾಪುರದಲ್ಲಿ ಅ.6ರಂದು ಸುದ್ದಿಗಾರರ ಜೊತೆಗೆ ಮಾತನಾಡುತ್ತಾ ಅವರು, ನವೆಂಬರ್ ಕ್ರಾಂತಿ ಉಹಾಪೋಹಗಳಿಗೆ ಬ್ರೇಕ್ ಹಾಕಿದರು. ರಾಜ್ಯದ ರಾಜಕಾರಣದಲ್ಲಿ ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಇಲ್ಲ ಭ್ರಾಂತಿಯೂ ಇಲ್ಲ ಎಂದು ಹೇಳುವ ಮೂಲಕ ತಮ್ಮ ವಿರೋಧಿ ಬಣಕ್ಕೆ ಟಾಂಗ್ ಕೊಟ್ಟರು.
ಇನ್ನು ಇದೇ ವೇಳೆ ಜಿಲ್ಲಾ ಕೇಂದ್ರದ ಸಮೀಪದಲ್ಲಿ ಬಲ್ನೋಟಾ ಕಂಪನಿ ಕಾರ್ಖಾನೆ ವಿಸ್ತರಣೆ ಮಾಡುವ ಕುರಿತ ಪ್ರಶ್ನೆಗೆ ಉತ್ತರಿಸಿ, ಕಾರ್ಖಾನೆಗಾಗಿ ಜಮೀನು ಕಳೆದುಕೊಂಡವರಿಗೆ ಇನ್ನಷ್ಟು ಪರಿಹಾರ ಕೊಡಬೇಕು ಎನ್ನುವ ಬೇಡಿಕೆಯಿದೆ. ಈ ಪ್ರಕರಣ ನ್ಯಾಯಾಲಯದಲ್ಲಿದೆ ಎಂದರು.
ಈಗಾಗಲೇ 1.10 ಕೋಟಿ ಕುಟುಂಬಗಳ ಸಮೀಕ್ಷಾ ಕಾರ್ಯ ಮುಗಿದಿದ್ದನಿನ್ನೆವರೆಗೆ ಶೇ.63 ರಷ್ಟು ಸರ್ವೇ ಕಾರ್ಯ ಪ್ರಗತಿಯಾಗಿದೆ. ನಾಳೆ ಸಂಜೆವರೆಗೆ ಸಮೀಕ್ಷೆಯ ಪ್ರಗತಿಯನ್ನು ಪರಿಶೀಲಿಸಿ, ಸಮೀಕ್ಷೆ ಅವಧಿ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಶೇ.97 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಸಮಾಜದಲ್ಲಿ ಬದಲಾವಣೆಯನ್ನು ವಿರೋಧಿಸುವವರು ಸಮೀಕ್ಷೆಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಕೊಪ್ಪಳದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಕಡಿಮೆ ಅಂತರದಲ್ಲಿ ಸೋತಿದ್ದರೂ, ಕೊಪ್ಪಳದ ಜನ ತನ್ನನ್ನು ಆಶೀರ್ವದಿಸಿದ್ದರು ಎಂದು ಸ್ಮರಿಸಿ ಜನತೆಗೆ ಧನ್ಯವಾದಗಳನ್ನು ತಿಳಿಸಿದರು.
ಇನ್ನು ಲಿಂಗಾಯತ ಧರ್ಮವನ್ನು ಪ್ರತ್ಯೇಕ ಧರ್ಮ ಎನ್ನುವ ಬಗ್ಗೆ ಮಾತನಾಡಿದ ಅವರು, ಜನರು ಸ್ವಯಂಪ್ರೇರಣೆಯಿಂದ ತಮ್ಮ ಧರ್ಮವನ್ನು ತಿಳಿಸಿದಂತೆ, ಸಮೀಕ್ಷಾಗಾರರು ಧರ್ಮವನ್ನು ನಮೂದಿಸಿಕೊಳ್ಳುತ್ತಾರೆ. ಈ ಬಗ್ಗೆ ಜನರ ನಿಲುವೇ ನನ್ನ ನಿಲುವು. ಇದರಲ್ಲಿ ಯಾವುದೇ ಎರಡು ಮಾತಿಲ್ಲ ಎಂದು ಸಿಎಂ ತಿಳಿಸಿದರು.