ಮುದ್ದೇಬಿಹಾಳ : ತಾಲ್ಲೂಕಿನ ಶಿರೋಳ ಗ್ರಾಮದ ಹತ್ತಿರ ಕಾಲುವೆಯಲ್ಲಿ ನ.11, 2025ರಂದು ಒಂದೇ ಕುಟುಂಬದ ಮೂವರು ಮುಳುಗಿ ಮೃತಪಟ್ಟ ಘಟನೆಗೆ ಸಂಬoಧಿಸಿದoತೆ ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೆ ತಲಾ ಎರಡು ಲಕ್ಷ ರೂಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಿದೆ.
ಈ ಕುರಿತು ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ ರಮೇಶ ಕೋನರೆಡ್ಡಿ ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಅವರ ಪತ್ರದ ಆಧಾರದ ಮೇಲೆ ಶಿರೋಳ ಗ್ರಾಮದ ಬಳಿ ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಬಸಮ್ಮ ಕೊಣ್ಣೂರ ಕಾಲು ಜಾರಿ ಬಿದ್ದಿದ್ದ ಸಂದರ್ಭದಲ್ಲಿ ಇವರನ್ನು ರಕ್ಷಿಸಲು ಹೋಗಿ ಸಂತೋಷ ಕೊಣ್ಣೂರ, ರವಿ ಕೊಣ್ಣೂರ ಮುಳುಗಿ ಮೃತಪಟ್ಟಿದ್ದು ಸದರಿ ಕುಟುಂಬದವರು ಸುಡುಗಾಡ ಸಿದ್ಧರ ಸಮುದಾಯಕ್ಕೆ ಸೇರಿದ್ದು ಕಡುಬಡವರಾಗಿದ್ದಾರೆ.ಅವರ ಕುಟುಂಬಕ್ಕೆ ಮಾನವೀಯತೆಯ ದೃಷ್ಟಿಯಿಂದ ವಿಶೇಷ ಪ್ರಕರಣದಡಿಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಗರಿಷ್ಠ ನೆರವು ನೀಡುವಂತೆ ಶಾಸಕರು ಕೋರಿದ್ದರು.
ಅದರಂತೆ ವಿಜಯಪುರ ಜಿಲ್ಲಾಧಿಕಾರಿಗಳ ಖಾತೆಗೆ ಸಿಎಂ ಪರಿಹಾರ ನಿಧಿಯಿಂದ ಫೆ.17 ರಂದು ಆರು ಲಕ್ಷ ರೂ.ಹಣ ಜಮೆಯಾಗಿದೆ.ಶೀಘ್ರದಲ್ಲಿ ನೊಂದ ಕುಟುಂಬದವರಿಗೆ ಪರಿಹಾರಧನ ಆದೇಶ ಪ್ರತಿ ನೀಡಲಾಗುವುದು ಎಂದು ಶಾಸಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







