ಬೆಂಗಳೂರು, ಜುಲೈ31: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಧಾರವಾಡ ಮತ್ತು ಮೈಸೂರಿನಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಿದ್ದು, ಈ ಸಂಬಂಧ ವಿಕಾಸಸೌಧದಲ್ಲಿ ನಡೆದ ಪ್ರಾತ್ಯಕ್ಷೆಯನ್ನು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ಅಧಿಕಾರಿಗಳೊಂದಿಗೆ ವೀಕ್ಷಿಸಿದರು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹೆಚ್ಚುವರಿ ಕೌಶಲ್ಯಗಳನ್ನು ಕಲಿಸಲು ಜಾಗತಿಕ ಮಟ್ಟದ ವೃತ್ತಿ ತರಬೇತಿ ಮತ್ತು ಕೌಶಲ್ಯ ಉನ್ನತೀಕರಣ, ಕಾರ್ಮಿಕರ ನೈಪುಣ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲು ಮಂಡಳಿಯು ಮುಂದಾಗಿದೆ. ಉನ್ನತೀಕರಿಸಿದ ಕೌಶಲ್ಯ ಕೇಂದ್ರಗಳು ಇವಾಗಿದ್ದು, ಈ ಸಂಬಂಧ ಈಗಾಗಲೇ ಇಲಾಖೆಯು ಹಲವು ಹೆಜ್ಜೆಗಳನ್ನು ಇಟ್ಟಿದೆ. ಇತ್ತೀಚೆಗೆ ಭಾಗಿದಾರರೊಂದಿಗೆ ಕೌಶಲ್ಯ ಕೇಂದ್ರಗಳ ಬಗ್ಗೆ ಕಾರ್ಯಾಗಾರವನ್ನೂ ಆಯೋಜಿಸಲಾಗಿತ್ತು.
ಇಂದು ನಡೆದ ಪ್ರಾತ್ಯಕ್ಷಿಕೆಯಲ್ಲಿ ಕಾರ್ಮಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ರೋಹಿಣಿ ಸಿಂಧೂರಿ ದಾಸರಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯದರ್ಶಿಗಳಾದ ಭಾರತಿ, ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆಯ ನಿರ್ದೇಶಕರಾದ ಶ್ರೀನಿವಾಸ್, ಮಂಡಳಿಯ ಉಪ ಕಾರ್ಮಿಕ ಆಯುಕ್ತರಾದ ಜಾನ್ಸನ್ ಮಂಡಳಿಯ ಜಂಟಿ ಕಾರ್ಯದರ್ಶಿಗಳಾದ ಉಮೇಶ್ ಪಾಲ್ಗೊಂಡಿದ್ದರು.