ಮುದ್ದೇಬಿಹಾಳ : ಮಕ್ಕಳ ಮನಸ್ಸಿನಲ್ಲಿ ಬಾಲ್ಯದಿಂದಲೇ ದೇಶಪ್ರೇಮದ ಬೀಜ ಬಿತ್ತಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರದು ಹಾಗೂ ಪಾಲಕರದಾಗಿದೆ ಎಂದು ಹಿರಿಯ ಸಾಹಿತಿ ಅಶೋಕ ಮಣಿ ನುಡಿದರು.
ಅವರು ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿರುವ ವಿದ್ಯಾಸ್ಪೂರ್ತಿ ಇಂಟರ್ ನ್ಯಾಶನಲ್ ಸ್ಕೂಲಿನಲ್ಲಿ 79 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು, ಧ್ವಜಾರೋಹಣ ನರೆವೇರಿಸಿ ಮಾತನಾಡಿದರು.
ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಬೇಡಿ ಪುಸ್ತಕ ಕೊಡಿ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರ ಬದುಕು ಬರಹ ಕುರಿತು ಬೆಳಕು ಚೆಲ್ಲುವ ವಿಷಯಗಳನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಿ, ಮಕ್ಕಳಲ್ಲಿ ರಾಷ್ಟ್ರಪ್ರೇಮ ಜಾಗ್ರತವಾಗುವಂತೆ ಸರಕಾರ ಹಾಗೂ ಶಿಕ್ಷಣ ಇಲಾಖೆ ಮಾಡಬೇಕು.
ನಮ್ಮ ದೇಶ ಶೈಕ್ಷಣಿಕ, ವೈಜ್ಞಾನಿಕ,ಆರ್ಥಿಕವಾಗಿ, ಹಾಗೂ ಸೈನಿಕ ರಂಗದಲ್ಲಿ ಬಲಿಷ್ಠವಾಗಿ ಮುನ್ನಡೆದಿದೆ. ಇದು ಕೆಲವೊಂದು ರಾಷ್ಟ್ರಗಳಿಗೆ ಸಹಿಸಲಾಗುತ್ತಿಲ್ಲ. ಜಾತಿಯ ವಿಷ ಬೀಜ ಬಿತ್ತಿ, ನಮ್ಮ ಒಕ್ಕಟ್ಟನ್ನು ಒಡೆಯಲು ನಿರಂತರ ಹುನ್ನಾರ ನಡೆಸುತ್ತಿವೆ. ಹೇಗಾದರೂ ಮಾಡಿ ಭಾರತದ ಕಾಲೆಳೆಯಲು ಆ ಕುತಂತ್ರಿ ರಾಷ್ಟ್ರಗಳು ಪ್ರಯತ್ನಿಸುತ್ತಲೇ ಇವೆ. ಆದರೆ, ಭಾರತ ಆ ರಾಷ್ಟ್ರಗಳಿಗೆ ಬಗ್ಗುತ್ತಿಲ್ಲ.ಜಗ್ಗುತ್ತಿಲ್ಲ ಹಾಗೂ ಕುಗ್ಗುತ್ತಿಲ್ಲ. ದಿಟ್ಟ ಉತ್ತರವನ್ನು ಕೊಡುತ್ತಲೇ ಮುನ್ನೆಡೆದಿದೆ. ಭಾರತೀಯರಾದ ನಾವು ಜಾತಿ ಮತ ಪಂಥವೆಂಬ ಬೇಧ ಭಾವ ಎನಿಸದೇ ಒಂದಾಗಿ ಸದೃಢ ಭಾರತ ಕಟ್ಟಲು ಪಣತೊಡೋಣ ಎಂದು ಅವರು ನುಡಿದರು.
ವಿದ್ಯಾಸ್ಪೂರ್ತಿ ಇಂಟರ್ ನ್ಯಾಶನಲ್ ಸ್ಕೂಲಿನ ಅಧ್ಯಕ್ಷೆ ಬಸಮ್ಮ ಸಿದರಡ್ಡಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸುವುದು ಪ್ರತಿಯೊಬ್ಬ ತಂದೆ ತಾಯಂದಿರ ಕರ್ತವ್ಯ. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ನಿರ್ಲಕ್ಷ ವಹಿಸುವುದು ಸಲ್ಲದು ಎಂದರು.
ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಹಾಂತೇಶ ಸಿದರಡ್ಡಿ ಮಾತನಾಡಿ, ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸಬೇಕು. ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ ಎಂದರು.
ಮುಖ್ಯ ಅತಿಥಿಗಳಾಗಿ ಉದ್ದಿಮೆದಾರ ಸಂಜಯ ಓಸ್ವಾಲ ಆಗಮಿಸಿದ್ದರು. ಅತಿಥಿಗಳಾಗಿ ಹಿರಿಯ ಪತ್ರಕರ್ತ ಶಂಕರ ಹೆಬ್ಬಾಳ, ಮಾಜಿ ಸೈನಿಕ ಗೌಡಪ್ಪ ಚವನಭಾವಿ ಉಪಸ್ಥಿತರಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಹಾಗೂ ಶಿಕ್ಷಕ ಸಿಬ್ಬಂದಿ ಪಾಲ್ಗೊಂಡಿದ್ದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರದ ಜನರ ಗಮನ ಸೆಳೆದವು. ದಂಡಮ್ಮ ಮಡಿವಾಳರ ಶಿಕ್ಷಕಿಯರು ಸ್ವಾಗತಿಸಿದರು. ಅರ್ಶಿಯಾ ಸಂಕನಾಳ ಶಿಕ್ಷಕಿಯರು ವಂದಿಸಿದರು.ಶೈಲಜಾ ಪಾಟೀಲ್ ಶಿಕ್ಷಕಿಯರು ಕಾರ್ಯಕ್ರಮ ನಿರೂಪಿಸಿದರು.