ಮುದ್ದೇಬಿಹಾಳ : ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿಗೆ ತ್ವರಿತವಾಗಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ಸಂಸ್ಥೆಯ ಮಾಜಿ ಸದಸ್ಯ ಮಹೆಬೂಬ ಅತ್ತಾರ ನೇತೃತ್ವದಲ್ಲಿ ಶುಕ್ರವಾರ ತಹಸಿಲ್ದಾರ್ ಕೀರ್ತಿ ಚಾಲಕ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದ ಮುಸ್ಲಿಂ ಸಮಾಜದ ಮುಖಂಡರು, ಕರ್ನಾಟಕ ರಾಜ್ಯ ವಕ್ಭ್ ಬೋರ್ಡ್ ಆದೇಶ ಜೂ.19 ರಂದೇ ನಿಮ್ಮನ್ನು ಅಂಜುಮನ್ ಇಸ್ಲಾಂ ಕಮೀಟಿ ಸಂಸ್ಥೆಯ ಚುನಾವಣೆ ಮತ್ತು ನೋಂದಣಿ ಅಧಿಕಾರಿಯಾಗಿ ನೇಮಿಸಲಾಗಿದೆ. ಆದರೆ ಈವರೆಗೂ ಚುನಾವಣೆ ಪ್ರಕ್ರಿಯೆಗಳು ಜರುಗಿರುವುದಿಲ್ಲ ಎಂದು ತಿಳಿಸಿದರು.
ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆಯನ್ನು ತ್ವರಿತವಾಗಿ ನಡೆಸುವುದು ಸಂಸ್ಥೆಯ ಹಿತಾಸಕ್ತಿ ಹಾಗೂ ಸದಸ್ಯರ ಹಕ್ಕುಗಳಿಗೆ ಅಗತ್ಯವಾಗಿದೆ. ಒಂದು ವೇಳೆ ವಿಳಂಬ ಮಾಡಿದ್ದಲ್ಲಿ ಆ.29 ರಂದು ಮುದ್ದೇಬಿಹಾಳ ತಹಸೀಲ್ದಾರ್ ಕಚೇರಿ ಎದುರಿಗೆ ಶಾಂತಿಯುತ ಧರಣಿ ನಡೆಸುತ್ತೇವೆ ಎಂದು ತಿಳಿಸಿದರು.
ತಹಸೀಲ್ದಾರ್ ಕೀರ್ತಿ ಚಾಲಕ ಮಾತನಾಡಿ, ಜಿಲ್ಲಾ ವಕ್ಭ್ ಬೋರ್ಡ್ ಅಧಿಕಾರಿಯೊಂದಿಗೆ ಮಾತನಾಡಿ ಕೂಡಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ಮನವಿ ಸಲ್ಲಿಕೆ ಸಂದರ್ಭದಲ್ಲಿ ಎಂ.ಎ.ಮೋಮಿನ, ಇರ್ಫಾನ ಕೂಡಗಿ, ಸಿಕಂದರ್ ಜಾನ್ವೇಕರ, ಹುಸೇನ ಮುಲ್ಲಾ, ಕೆ.ಎ.ರಿಸಾಲ್ದಾರ್, ಆರ್. ಎಂ. ಮುದ್ನಾಳ, ಎಂ.ಬಿ.ಮಕಾನದಾರ,ಸುಲೈಮಾನ ಮಮದಾಪುರ, ಎ.ಡಿ.ಗೋಲಂದಾಜ, ಯು.ಡಿ.ಚೌಧರಿ, ಎಂ.ಎಚ್.ನದಾಫ, ಎ.ಎ.ನಾಯ್ಕೋಡಿ, ಎ.ಎಸ್.ಮೋಮಿನ, ಎಚ್.ಬಿ.ಸಾಲಿಮನಿ ಇದ್ದರು.