ಮುದ್ದೇಬಿಹಾಳ : ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆ ಮುಗಿಸಿಕೊಂಡು ಮರಳಿ ತಮ್ಮೂರಿಗೆ ಬೈಕ್ ಮೇಲೆ ಹೊರಟಿದ್ದ ಇಬ್ಬರು ವಿದ್ಯಾರ್ಥಿಗಳಿದ್ದ ಬೈಕ್ ಹಾಗೂ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ ಹೊಡೆದು ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಅಸುನೀಗಿದ್ದು ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬಿದರಕುಂದಿ ಗ್ರಾಮದ ಸಮೀಪದಲ್ಲಿ ಶನಿವಾರ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿಯನ್ನು ಮುದ್ದೇಬಿಹಾಳ ಪಟ್ಟಣದ ಶಾಂತಲಾ ಪ್ರೌಢಶಾಲೆಯ ವಿದ್ಯಾರ್ಥಿ, ತಾಲ್ಲೂಕಿನ ಗೋನಾಳ ಪಿ.ಎನ್. ಗ್ರಾಮದ ನಿವಾಸಿ ಮಹೇಶ ಬಸಪ್ಪ ಮಾದರ(16)ಎಂದು ಗುರುತಿಸಲಾಗಿದೆ. ಇನ್ನೋರ್ವ ವಿದ್ಯಾರ್ಥಿ ಬಿದರಕುಂದಿ ಗ್ರಾಮದ ಶ್ರೀಶೈಲ ಸಿದ್ಧಣ್ಣ ಬೂದಿಹಾಳ ಎಂಬಾತನು ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಜೇವರ್ಗಿ ತಾಲ್ಲೂಕು ಮದರಿ ಗ್ರಾಮದ ಜಾತ್ರೆಯಲ್ಲಿ ಎತ್ತುಗಳನ್ನು ಖರೀದಿಸಿಕೊಂಡು ಹುನಗುಂದ ತಾಲ್ಲೂಕು ಬೇವಿನಮಟ್ಟಿಗೆ ತೆರಳುತ್ತಿದ್ದ ಗೂಡ್ಸ್ ವಾಹನ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎನ್ನಲಾಗಿದೆ.ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪಿಎಸ್‌ಐ ಸಂಜಯ ತಿಪರೆಡ್ಡಿ, ಅಪರಾಧ ವಿಭಾಗದ ಪಿಎಸ್‌ಐ ಆರ್.ಎಸ್.ಭಂಗಿ ಭೇಟಿ ನೀಡಿದ್ದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.
ಮುಗಿಲು ಮುಟ್ಟಿದ ಆಕ್ರಂದನ:
ಪೂರ್ವ ಸಿದ್ಧತಾ ಪರೀಕ್ಷೆ ಮುಗಿಸಿಕೊಂಡು ಹೊರಟ್ಟಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ತಿಳಿಯುತ್ತಿದ್ದಂತೆ ಮೃತನ ಸಂಬAಧಿಕರು,ಆತನ ಸ್ನೇಹಿತರು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದರು.ಮೃತಪಟ್ಟ ವಿದ್ಯಾರ್ಥಿಯ ತಂದೆ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ಮಹೇಶ ಉತ್ತಮ ಕಬಡ್ಡಿ ಕ್ರೀಡಾಪಟು ಕೂಡಾ ಆಗಿದ್ದ ಎಂದು ಬಿದರಕುಂದಿ ಕಬಡ್ಡಿ ತರಬೇತಿದಾರ ಚೇತನ ಹೇಳಿದರು.ಮುಖ್ಯಪರೀಕ್ಷೆ ಎದುರಿಸುವ ಮುನ್ನವೇ ವಿಧಿ ಆತನ ಜೀವನದ ಪರೀಕ್ಷೆಯನ್ನೇ ಅಪಘಾತದ ರೂಪದಲ್ಲಿ ಕರೆದೊಯ್ದಿರುವುದು ಗ್ರಾಮಸ್ಥರಲ್ಲಿ ತೀವ್ರ ಶೋಕಕ್ಕೆ ಕಾರಣವಾಗಿದೆ.







