ಮುದ್ದೇಬಿಹಾಳ : ಉತ್ತರ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಮೆಡಿಕಲ್ ಸೀಟುಗಳನ್ನು ಪಡೆದುಕೊಳ್ಳುವಲ್ಲಿ ಹಿರಿಮೆ ಸಾಧಿಸಿರುವ ನಮ್ಮ ಸಂಸ್ಥೆಯಿoದ ಮುಂದಿನ ವರ್ಷ 200 ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್ ಸೀಟು ಪಡೆದುಕೊಳ್ಳುವಲ್ಲಿ ಯಶ ಕಾಣುವ ವಿಶ್ವಾಸ ಇದೆ ಎಂದು ಆಕ್ಸಫರ್ಡ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ ಹೇಳಿದರು.
ತಾಲ್ಲೂಕು ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನಲ್ಲಿ ಭಾನವಾರ 2025ನೇ ಸಾಲಿನಲ್ಲಿ 187 ಮೆಡಿಕಲ್ ಸೀಟು ಪಡೆದುಕೊಂಡ 187 ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ.ವಿದ್ಯಾರ್ಥಿಗಳ ಏಳ್ಗೆಗಾಗಿ ಸಂಸ್ಥೆಯಿoದ ಶಿಕ್ಷಕರು,ಉಪನ್ಯಾಸಕರು ಅಗತ್ಯ ಮಾರ್ಗದರ್ಶನ ಮಾಡಲಿದ್ದು ನಮ್ಮ ಸಂಸ್ಥೆಯಿoದ ಈಗಾಗಲೇ 1200ಕ್ಕೂ ಹೆಚ್ಚು ಎಂ.ಬಿ.ಬಿ.ಎಸ್., 1800ಕ್ಕೂ ಹೆಚ್ಚು ಬಿಎಎಎಂಎಸ್, 400ಕ್ಕೂ ಹೆಚ್ಚು ಪಶುವೈದ್ಯಕೀಯ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ.ವಿಶೇಷವಾಗಿ ವೈದ್ಯಕೀಯ ಕೋರ್ಸಿಗೆ ಸೇರಲು ಅಗತ್ಯ ತರಬೇತಿ ನೀಡಲಾಗುತ್ತದೆ ಎಂದರು.
ಬಿರಾದಾರ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ವೈದ್ಯ ಡಾ.ವಿಜಯಶೇಖರ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ನಂತರ ಕರಿಯರ್ ಕುರಿತು ತರಬೇತಿ ಕೊಡುವ ಕೆಲಸ ಆಗಬೇಕು. ಮುಂದಿನ ಜೀವನ ಹೇಗೆ, ಯಾವ ಸ್ನಾತಕೋತ್ತರ ಪದವಿ ಆಯ್ದುಕೊಳ್ಳಬೇಕು ಎಂಬ ಬಗ್ಗೆ ತರಬೇತಿ ನೀಡಬೇಕು ಎಂದರು.
ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯ ಚಿಕ್ಕಮಕ್ಕಳ ವೈದ್ಯ ಡಾ.ಪರಶುರಾಮ ವಡ್ಡರ ಮಾತನಾಡಿ,ಎಂಬಿಬಿಎಸ್ ಎಂ.ಡಿ ಓದಲು ಅಡಿಪಾಯ.ಎರಡು ವರ್ಷ ಚೆನ್ನಾಗಿ ಓದಬೇಕು.ತಂದೆ ತಾಯಿ, ಪಾಲಕರು ಕಷ್ಟಪಟ್ಟು ಓದಿಸಲು ಕಳಿಸಿರುವಾಗ ಅದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಚಿರ್ಚನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಟಿ.ಡಿ.ಲಮಾಣಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವೈದ್ಯರಾಗುವ ಕನಸಿಗೆ ನೀರೆರೆದು ಪೋಷಿಸುವ ಕೆಲಸ ಆಕ್ಸಫರ್ಡ್ ಸಮೂಹ ಶಿಕ್ಷಣ ಸಂಸ್ಥೆಯಿoದ ಮಾಡಲಾಗುತ್ತಿದ್ದು ಇಲ್ಲಿಯ ತರಬೇತಿ ಉತ್ತಮವಾಗಿದೆ ಎಂದರು.
ಶಿಕ್ಷಕ ಸಂಗಮೇಶ ಹೂಗಾರ, ಆಕ್ಸಫರ್ಡ ಆಂಗ್ಲಮಾಧ್ಯಮ ಪ್ರೌಢಶಾಲೆ ಮುಖ್ಯಗುರು ಇಸ್ಮಾಯಿಲ ಮನಿಯಾರ,ಕರೇಕಲ್ ಪಾಟೀಲ್ ಆಸ್ಪತ್ರೆಯ ವೈದ್ಯ ಡಾ.ಬಸನಗೌಡ ಕರೇಕಲ್ಲಪಾಟೀಲ ಮಾತನಾಡಿದರು.ಡಾ.ಎಸ್.ಬಿ.ಗಂಗನಗೌಡರ,ವಿಜಯಕುಮಾರ ಪಾಟೀಲ,ರಾಜಶೇಖರ ಹಿರೇಮಠ,ರೇವಣಸಿದ್ದ ಮುರಾಳ,ಕೆ.ಎಸ್.ಚಟ್ಟಿ,ಎನ್.ಎ.ಬಿರಾಜದಾರ,ಮಂಜುನಾಥ ಮಂಕಣಿ, ಮೊದಲಾದವರು ಇದ್ದರು.







