ಮುದ್ದೇಬಿಹಾಳ : ಎಲ್ಲದಕ್ಕೂ ಮನಸ್ಸೆ ಕಾರಣವಾಗಿದ್ದು ಇನ್ನೊಬ್ಬರ ಮನೆ ಹಾಳು ಮಾಡುವುದು ಮನಸ್ಸೇ ಆಗಿದೆ.ತುಳಿಯುವವರ ಮಧ್ಯೆ ಬೆಳೆಯುವುದೇ ದೊಡ್ಡ ಸಾಧನೆಯಾಗಿದೆ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು.
ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಜ್ಜಲಗುಡ್ಡ ಶರಣಮ್ಮನವರ ಪುರಾಣ ಮಹಾಮಂಗಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾಕಿಸ್ತಾನ,ಬಾಂಗ್ಲಾದೇಶಗಳಿಗೆ ಮಾತಾ ಎಂದು ಕರೆದಿಲ್ಲ.ಆದರೆ ಭಾರತಕ್ಕೆ ಮಾತ್ರ ಮಾತಾ ಎಂದು ಕರೆಯುತ್ತಾರೆ. ಯಾಕೆಂದರೆ ಇಲ್ಲಿ ಇರುವ ಪ್ರತಿಯೊಬ್ಬರು ಮಾತೆಯ ಸ್ವರೂಪರು,ನಮ್ಮ ದೇಶದ ಮಹಿಳೆಯರೆಲ್ಲರೂ ಮಹಾರಾಣಿಯರು ಎಂದರು.
ಸಂಸಾರದಲ್ಲಿ ಪ್ರೀತಿ ಕಮ್ಮಿ ಆಗದಂತೆ ನೋಡಿಕೊಳ್ಳಬೇಕು.ನಮ್ಮ ಹಿಂದೆ ಮಾತನಾಡುವವರು ಇದ್ದೇ ಇರುತ್ತಾರೆ.ಇನ್ನೊಬ್ಬರ ಟೀಕೆಗಳಿಗೆ ಹೆದರುವುದು ಸಲ್ಲದು.ನಾನು ನಮ್ಮ ಮನೆಯವರು ಇನ್ನೊಬ್ಬರ ಉಸಾಬರಿ ಮಾಡುವುದು ಬಿಡುತ್ತೇವೆ ಎಂದು ಹೇಳಿದರೆ ಸಂಸಾರ,ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದರು.
ಹೊಸ ವರ್ಷ ಎಂದರೆ ಭಾರತೀಯ ಸಂಸ್ಕೃತಿಯಲ್ಲಿ ಯುಗಾದಿ ಹೊಸ ವರುಷವಾಗಿದೆ.ಅಂದು ಭಾರತೀಯರು ಮೈಗೆ ಎಣ್ಣಿ ಹಚ್ಚಿಕೊಂಡು ಪರಸ್ಪರ ಕೈಮುಗಿಯುತ್ತೇವೆ.ಆದರೆ ಪಾಶ್ಚಿಮಾತ್ಯರ ಸಂಸ್ಕೃತಿಯಲ್ಲಿ ಹೊಟ್ಟೆಗೆ ಎಣ್ಣಿ ಹಾಕಿಕೊಂಡು ರಸ್ತೆ ಬದಿ ಬಿದ್ದುಕೊಂಡರೆ ಅದು ಇಂಗ್ಲಿಷ್‌ರ ಹೊಸ ವರ್ಷ ಎಂದು ತಿಳಿದುಕೊಳ್ಳುವಂತಾಗಿದೆ.ನಾವು ಪಾಶ್ಚಿಮಾತ್ಯ ಸಂಸ್ಕೃತಿ ಅಳವಡಿಸಿಕೊಂಡರೆ ಸುಧಾರಿಸವುದಿಲ್ಲ.ಪಾಶ್ಚಿಮಾತ್ಯರು ನಮ್ಮ ದೇಶೀಯ ಸಂಸ್ಕೃತಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು. ಬಸವನ ಬಾಗೇವಾಡಿ ಒಡೆಯ ಶಿವಪ್ರಕಾಶ ಶಿವಾಚಾರ್ಯರು ಮಾತನಾಡಿ, ಈ ಭಾಗದಲ್ಲಿ ತಾಳಿಕೋಟಿ ಮಠದ ಕೀರ್ತಿಯನ್ನು ಉನ್ನತ ಮಟ್ಟಕ್ಕೆ ಬೆಳೆಸುತ್ತಿರುವ ಸಿದ್ಧಲಿಂಗ ದೇವರು ನಮ್ಮ ಭಾಗದಲ್ಲಿ ಒಳ್ಳೆಯ ಹೆಸರು ಗಳಿಸುತ್ತಿರುವುದು ಸಂತಸದ ಸಂಗತಿ ಎಂದರು.ಜAಗಮ ಸಮಾಜದ ಮಾಜಿ ಅಧ್ಯಕ್ಷ ಸಿದ್ಧಲಿಂಗಯ್ಯ ಕಲ್ಯಾಣಮಠ, ವೇ.ಮುರುಗೇಶ ವಿರಕ್ತಮಠ,ಕೋಳೂರಿನ ಸಂತೋಷ ಹಿರೇಮಠ ಇದ್ದರು.
ನನ್ನ ಉಸಿರು ಇರುವರೆಗೂ ಖಾಸ್ಗತೇಶ್ವರ ಮಠದಲ್ಲಿಯೇ ಇರುವೆ-ಸಿದ್ಧಲಿಂಗ ದೇವರು :
ಖಾಸ್ಗತೇಶ್ವರ ಮಠದಲ್ಲಿ ಹುಟ್ಟಿ ಬೆಳೆದಿರುವ ನನಗೆ ದೊಡ್ಡ ದೊಡ್ಡ ಮಠದ ಆಹ್ವಾನ ಬಂದಿತ್ತು.ಜಗದ್ಗುರು ಪಟ್ಟವು ಇದೆ ಎಂದು ಹೇಳಿದ್ದರು.ಆದರೆ ನನ್ನ ಉಸಿರು ಇರುವರೆಗೂ ಖಾಸ್ಗತೇಶ್ವರ ಮಠದಲ್ಲಿಯೇ ಇರುವೆ. ವಿರಕ್ತ ಶ್ರೀಗಳ ಆಶಯದಂತೆ ತಾಳಿಕೋಟೆ ಖಾಸ್ಗತೇಶ್ವರ ಭಾಗದಲ್ಲಿ ಬಹುದೊಡ್ಡ ಸಂಗೀತ ಪಾಠಶಾಲೆ, ನಿರಂತರ ನಿತ್ಯ ದಾಸೋಹ, ಶಿಕ್ಷಣದ ದಾಸೋಹ,ಮಹಿಳೆಯರಿಂದಲೇ ಶಾಖಾ ಮಠಗಳಲ್ಲಿ ರಥೋತ್ಸವದ ಕಾರ್ಯಗಳ ಸಂಕಲ್ಪ ಹೊಂದಿದ್ದು ಅದನ್ನು ಈಡೇರಿಸುವರೆಗೂ ವಿರಮಿಸುವುದಿಲ್ಲ ಎಂದು ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ನುಡಿದರು.







