ಮುದ್ದೇಬಿಹಾಳ : ಅಮವಾಸ್ಯೆಯ ಪ್ರಯುಕ್ತ ಎತ್ತುಗಳನ್ನು ತೊಳೆಯಲು ಕೃಷ್ಣಾ ನದಿ ತೀರಕ್ಕೆ ಹೋಗಿದ್ದ ರೈತರೊಬ್ಬರನ್ನು ಮೊಸಳೆಯೊಂದು ಎಳೆದುಕೊಂಡು ಹೋಗಿದ್ದು ಐದು ಗಂಟೆಗಳ ಕಾರ್ಯಾಚರಣೆ ನಂತರ ರೈತ ಶವ ಪತ್ತೆಯಾಗಿರುವ ಘಟನೆ ತಾಲ್ಲೂಕಿನ ಕುಂಚಗನೂರ ಗ್ರಾಮದಲ್ಲಿ ಶನಿವಾರ ನಡೆದಿದೆ.
ತಂಗಡಗಿ ಗ್ರಾ.ಪಂ ವ್ಯಾಪ್ತಿಯ ಕುಂಚಗನೂರ ಗ್ರಾಮದ ಪಂಪಹೌಸ್ ಬಳಿ ಈ ಘಟನೆ ನಡೆದಿದೆ. ಕುಂಚಗನೂರ ಗ್ರಾಮದ ಕಾಶಪ್ಪ ಹಣಮಂತ ಕಂಬಳಿ(38) ಎಂಬ ರೈತನೇ ಮೊಸಳೆ ದಾಳಿಗೆ ಒಳಗಾದವರು. ಕುಂಚಗನೂರ ಗ್ರಾಮದ ಕೆಲವರು ಮೊಸಳೆ ಕಾಶಪ್ಪನನ್ನು ಎಳೆದೊಯ್ಯುವುದನ್ನು ನೋಡಿದ್ದಾರೆ ಎನ್ನಲಾಗಿದ್ದು ಕಾರ್ಯಾಚರಣೆ ಬಳಿಕ ಶವ ಪತ್ತೆ ಆಗಿದೆ.
ಜಂಟಿ ಕಾರ್ಯಾಚರಣೆ: ಕಂದಾಯ, ಪೊಲೀಸ್, ಅಗ್ನಿಶಾಮಕ ಹಾಗೂ ಗ್ರಾಪಂ ಅಧಿಕಾರಿಗಳು ಮೊಸಳೆ ಹೊತ್ತೊಯ್ದಿದ್ದ ರೈತನ ಶವ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದರು. ಆರಂಭದಲ್ಲಿ ಶವ ಪತ್ತೆ ಆಗದ ಕಾರಣ ಕೂಡಲಸಂಗಮದಿಂದ ಬೋಟ್ ತರಿಸಿಕೊಂಡು ಕಾರ್ಯಾಚರಣೆ ಮುಂದುವರೆಸಿದಾಗ ಶವ ಪತ್ತೆ ಆಗಿದೆ ಎಂದು ಪೊಲೀಸ ಮೂಲಗಳು ತಿಳಿಸಿವೆ.
ಈ ಕುರಿತು ಮೃತ ರೈತನ ಪತ್ನಿ ಯಲ್ಲವ್ವ ಕಂಬಳಿ ತನ್ನ ಪತಿ ಮೊಸಳೆ ದಾಳಿಯಿಂದಲೇ ಅಸುನೀಗಿದ್ದಾರೆ ಎಂದು ಪೊಲೀಸ ಠಾಣೆಗೆ ದೂರು ನೀಡಿದ್ದಾಗಿ ಪಿಎಸ್‌ಐ ಸಂಜಯ ತಿಪರೆಡ್ಡಿ ತಿಳಿಸಿದ್ದಾರೆ.
ಕಾರ್ಯಾಚರಣೆ ಸಮಯದಲ್ಲಿ ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ ನಾಗೇಶ ರಾಠೋಡ, ಕಂದಾಯ ನಿರೀಕ್ಷಕ ಪವನ್ ತಳವಾರ, ಗ್ರಾಮ ಆಡಳಿತ ಅಧಿಕಾರಿ ಎಚ್.ಸಿ.ಕೊರಬು, ಅಗ್ನಿಶಾಮಕ ಇಲಾಖೆಯ ಶಿವಾನಂದ ವಾಲೀಕಾರ, ಶಕೀಲ್ ಅಹ್ಮದ ಅವಟಿ,ಕಾರ್ತಿಕ ಅಜಮನಿ, ಬಸವರಾಜ ಭಜಂತ್ರಿ, ರಾಜು ರಾಥೋಡ್, ಸುನೀಲ ನಾಯಕ, ವಿರೂಪಾಕ್ಷಿ ಪೂಜಾರಿ ಮೊದಲಾದವರು ಪಾಲ್ಗೊಂಡಿದ್ದರು.
ತಹಸೀಲ್ದಾರ್, ಪಿಎಸೈ ಭೇಟಿ: ಘಟನೆಯ ವಿಷಯ ತಿಳಿದ ನಂತರ ಕೆಲ ಗಂಟೆಗಳಲ್ಲಿ ತಹಸೀಲ್ದಾರ್ ಕೀರ್ತಿ ಚಾಲಕ, ಪಿಎಸೈ ಸಂಜಯ ತಿಪರೆಡ್ಡಿ ಭೇಟಿ ನೀಡಿ ಕಾರ್ಯಾಚರಣೆ ವೀಕ್ಷಿಸಿದರು. ಅಲ್ಲದೇ ರೈತನ ಕುಟುಂಬದವರಿಂದ ಮಾಹಿತಿ ಪಡೆದುಕೊಂಡರು.
50 ಲಕ್ಷ ರೂ. ಪರಿಹಾರಕ್ಕೆ ನಡಹಳ್ಳಿ ಆಗ್ರಹ
ಮುದ್ದೇಬಿಹಾಳ : ಕುಂಚಗನೂರು ಗ್ರಾಮದಲ್ಲಿ ಮೊಸಳೆ ದಾಳಿಗೆ ಒಳಗಾಗಿ ಪ್ರಾಣ ಕಳೆದುಕೊಂಡಿರುವ ರೈತ ಕಾಶಪ್ಪ ಕಂಬಳಿ ಕುಟುಂಬಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು.
ಕುಂಚಗನೂರದ ಪಂಪಹೌಸ್ ಬಳಿ ಮೊಸಳೆ ದಾಳಿಗೆ ಬಲಿಯಾದ ರೈತನ ಕುಟುಂಬದವರನ್ನು ಭೇಟಿ ಮಾಡಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಶಪ್ಪ ಕಂಬಳಿಯವರದ್ದು ಬಡ ರೈತನ ಕುಟುಂಬವಾಗಿದ್ದು ಆತನಿಗೆ ನಾಲ್ವರು ಮಕ್ಕಳಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಮೊಸಳೆ ದಾಳಿಗೆ ಜೀವ ಕಳೆದುಕೊಂಡಿರುವ ಅವರ ಕುಟುಂಬದ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ಒತ್ತಾಯಿಸಿದರು.
ಕೃಷ್ಣಾ ನದಿ ಪಾತ್ರದಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ನದಿ ದಂಡೆ ಗ್ರಾಮದ ಜನರಿಗೆ ಪ್ರವಾಹದ ಸಮಯದಲ್ಲಿ ಪೊಲೀಸ್ ಇಲಾಖೆಯವರು ನಿರಂತರವಾಗಿ ಕಣ್ಗಾವಲು ಇರಿಸಬೇಕು.ನದಿಯತ್ತ ತೆರಳದಂತೆ ಜನರಿಗೆ ಅರಿವು ಮೂಡಿಸಬೇಕು. ಆದರೆ ಘಟನೆ ನಡೆದ ಎರಡೂವರೆ ಗಂಟೆಗಳ ಬಳಿಕ ಪಿಎಸೈ ಸ್ಥಳಕ್ಕೆ ಬರುತ್ತಾರೆ. ರೈತರು ಠಾಣೆಗೆ ಬಂದೇ ಕೇಸ್ ಕೊಡಬೇಕು ಎಂದು ಹೇಳುತ್ತಾರೆ. ಮನೆಯ ಸದಸ್ಯನನ್ನು ಕಳೆದುಕೊಂಡಿದ್ದ ರೈತನ ಕುಟುಂಬದವರು ಠಾಣೆಗೆ ಹೋಗಿ ಕೇಸು ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಮೊಸಳೆಗಳ ಹಾವಳಿ ತಪ್ಪಿಸಲು ಹಿಂದಿನ ಅವಧಿಯಲ್ಲಿ 620 ಕೋಟಿ ರೂ.ಗಳ ಪ್ರಸ್ತಾವನೆಯನ್ನು 40 ಹಳ್ಳಿಗಳಿಗೆ ರಕ್ಷಣೆಗಾಗಿ ರಕ್ಷಣಾ ಗೋಡೆ ನಿರ್ಮಾಣಕ್ಕೆ ಸಲ್ಲಿಸಲಾಗಿತ್ತು. ಆದರೆ ಈ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ನಡಹಳ್ಳಿ ದೂರಿದರು. ಮುಖಂಡ ಎನ್. ಎಸ್. ದೇಶಮುಖ (ಕುಂಚಗನೂರ), ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಪ್ರಧಾನ ಕಾರ್ಯದರ್ಶಿ ಸಂಜೀವ ಬಾಗೇವಾಡಿ, ಗ್ರಾಪಂ ಮಾಜಿ ಅಧ್ಯಕ್ಷ ಶಿವಾನಂದ ಮಂಕಣಿ ಮೊದಲಾದವರು ಇದ್ದರು.