ಮುದ್ದೇಬಿಹಾಳ : ಸಾಮಾಜಿಕ ಜಾಲತಾಣಗಳ ಮೂಲಕ ಮದರಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ ಎನ್ನಲಾದ ಫೋಟೋ ಕೃತಕವಾಗಿ ಚಿತ್ರಿಸಿದ್ದು ಆ ಸ್ಥಳದಲ್ಲಿ ಚಿರತೆ ಕಾಣಿಸಿಕೊಂಡಿಲ್ಲ ಎಂದು ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ಬಸನಗೌಡ ಬಿರಾದಾರ ಸ್ಪಷ್ಟಪಡಿಸಿದ್ದಾರೆ.
ಚಿರತೆ ಕಾಣಿಸಿಕೊಂಡಿದ ಎಂದು ಗ್ರಾಮದ ಯುವಕ ಶಿವು ಕನ್ನೊಳ್ಳಿ ಎಂಬುವರು ತಮ್ಮ ಸ್ನೇಹಿತರ ಮೂಲಕ ಮಾಹಿತಿ ಪಡೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊoಡಿದ್ದ ಫೋಟೋ ಅಸಲಿ ಅಲ್ಲ.ಸದರಿ ಸ್ಥಳಕ್ಕೆ ನಮ್ಮ ಇಲಾಖೆಯ ಗಸ್ತು ಪಾಲಕ ವಿಠಲ ಬೋರಟಗಿ ಅವರನ್ನು ಕಳಿಸಿ ಪರಿಶೀಲನೆ ನಡೆಸಿದ್ದು ಅಲ್ಲಿ ಚಿರತೆ ಓಡಾಡಿದ ಯಾವುದೇ ಕುರುಹುಗಳಿಲ್ಲ.ಅಲ್ಲದೇ ಸದರಿ ಸ್ಥಳದ ಕಿರುಸೇತುವೆ ಹಿಂದೆ ಆಳವಾದ ಗುಂಡಿ ಇದ್ದು ಏಳೆಂಟು ಫೂಟ ಎತ್ತರ ಇರುವ ವ್ಯಕ್ತಿ ನಿಂತರೂ ಕಾಣುವುದಿಲ್ಲ.ಚಿರತೆ ಕಾಣಿಸಿಕೊಂಡಿರುವ ಕುರಿತು ಸ್ಪಷ್ಟವಾಗಿ ಯಾರೂ ಹೇಳುತ್ತಿಲ್ಲ.ಹೀಗಾಗಿ ಗ್ರಾಮಸ್ಥರು ಚಿರತೆ ಕಂಡಿದೆ ಎಂಬ ಸುದ್ದಿ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.
ಸುಳ್ಳು ವದಂತಿ ಹರಡಿಸಿದವರ ಮೇಲೆ ಕ್ರಮ: ಚಿರತೆ ಬಂದಿದೆ ಎಂದು ಸುಳ್ಳು ವದಂತಿ ಹಬ್ಬಿಸಿ ಅರಣ್ಯ ಇಲಾಖೆಯವರಿಗೆ ಹಾಗೂ ಗ್ರಾಮಸ್ಥರಿಗೆ ಆತಂಕವನ್ನುoಟು ಮಾಡುವ ವ್ಯಕ್ತಿಗಳ ಮೇಲೆ ಅರಣ್ಯ ಇಲಾಖೆಯ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಅಧಿಕಾರಿ ಬಸನಗೌಡ ಬಿರಾದಾರ ತಿಳಿಸಿದ್ದಾರೆ.ಮಾಹಿತಿ ಹಂಚಿಕೊoಡವರಿಗೆ ಮೊದಲು ನೋಟಿಸ್ ನೀಡಿ ಲಿಖಿತ ಹೇಳಿಕೆ ಪಡೆದುಕೊಳ್ಳುತ್ತೇವೆ.ಹೇಳಿಕೆ ಅಸ್ಪಷ್ಟವಾಗಿದ್ದರೆ ಅವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಎಂದು ಹೇಳಿದರು.
ಗ್ರಾಮಸ್ಥರ ಸ್ಪಷ್ಟನೆ: ಚಿರತೆ ಕಂಡಿದೆ ಎಂದು ಹಂಚಿಕೊಳ್ಳಲಾದ ಫೋಟೋ ಅಸಲಿ ಅಲ್ಲ ಎಂಬುದು ನಮಗೆ ತಡವಾಗಿ ಗೊತ್ತಾಯಿತು.ಕೆಲವು ಕಿಡಿಗೇಡಿಗಳು ಚಿರತೆ ಕಂಡಿದೆ ಎಂದು ಮಾತನಾಡಿದ್ದನ್ನೆ ಫೋಟೋ ಎಡಿಟ್ ಮಾಡಿ ಗ್ರಾಮಸ್ಥರಲ್ಲಿ ವಿನಾಕಾರಣ ಆತಂಕ ಹರಡುವಂತೆ ಮಾಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊAಡಿರುವ ಫೋಟೋ ಅಸಲಿ ಅಲ್ಲ.ಆದರೆ ಈ ಭಾಗದಲ್ಲಿ ಚಿರತೆ ಓಡಾಡಿರುವುದನ್ನು ಹಲವರು ಕಂಡಿದ್ದಾರೆ.ಹಳ್ಳದ ಬಳಿ ನೀರುನಾಯಿಗಳಿದ್ದು ಅವುಗಳ ಬೇಟೆಗೆ ಚಿರತೆ ಬಂದು ಹೋಗಿರುವ ಉದಾಹರಣೆಗಳು ಇವೆ ಎಂದು ಮದರಿ ಗ್ರಾಮದ ಮುಖಂಡ ಶಿವು ಕನ್ನೊಳ್ಳಿ ಸ್ಪಷ್ಟಪಡಿಸಿದ್ದಾರೆ.







