ತಾಳಿಕೋಟೆ: ಡೋಣಿ ನದಿಯ ಪ್ರವಾಹದಿಂದ ವಿಜಯಪುರ ರಸ್ತೆಯ ಕೆಳಮಟ್ಟದ ಸೇತುವೆ ಜಲಾವೃತವಾಗಿರುವದು ಒಂದು ಕಡೆಯಾದರೆ ಹಡಗಿನಾಳ ಗ್ರಾಮದ ಮೂಲಕ ಮೂಲಕ ಸಂಚರಿಸುವ ಮೂಕೀಹಾಳ ಗ್ರಾಮದ ಹತ್ತಿರದ ಹಳ್ಳದಲ್ಲಿಯೂ ಶುಕ್ರವಾರ ಸಾಯಂಕಾಲ ಪ್ರವಾಹದ ಉಕ್ಕಿ ಬಂದಿದ್ದರಿಂದ ಸಂಪೂರ್ಣ ಸಂಚಾರ ವ್ಯವಸ್ಥೆಯೇ ಕಡಿತಗೊಂಡ ಪರಿಣಾಮ ತಾಳಿಕೋಟೆಯಿಂದ ಮೂಕೀಹಾಳ ಗ್ರಾಮದ ಹಳ್ಳದ ವರೆಗಿನ 6 ಕೀಲೋ ಮೀಟರ್ ವಾಹನಗಳ ದಟ್ಟನೆ ನಿಂತಲ್ಲೇ ನಿಂತುಕೊಂಡಿವೆ.
ವಿಜಯಪುರ ಹಾಗೂ ಮುದ್ದೇಬಿಹಾಳ ಮಾರ್ಗದ ಕಡೆಯಿಂದ ಆಗಮಿಸಿದ ವಾಹನಗಳೂ ಸಹ ಸುಮಾರು 5 ಕೀಲೋ ಮೀಟರ್‌ವರೆಗೆ ನಿಂತಿದ್ದರೆ ಇತ್ತ ಮಿಣಜಗಿ ಕಡೆಯ 3 ಕೀಲೋ ಮೀಟರ್ ವರೆಗೆ ವಾಹನಗಳು ನಿಂತುಕೊಂಡಿದ್ದವು.
ಕೆಲವರು ಈ ಸಂಚಾರ ಸಂಪರ್ಕ ಕಡಿತಗೊಂಡಿರುವ ಸುದ್ದಿಯನ್ನು ಅರೀತುಕೊಂಡ ಖಾಸಗಿ ವಾಹನದೊಂದಿಗೆ ಸುಮಾರು 80 ಕೀಲೋ ಮೀಟರ್ ಅಂತರದ ಕೊಡೇಕಲ್ಲ, ನಾರಾಯಣಪೂರ, ನಾಲತವಾಡ ಮೂಲಕ ಮುದ್ದೇಬಿಹಾಳದ ಸಂಪರ್ಕವನ್ನು ಪಡೆದುಕೊಂಡರೆ ಇನ್ನೂ ಕೆಲವರು ದೇವರ ಹಿಪ್ಪರಗಿ ಮೂಲಕ 140 ಕೀಲೋ ಮೀಟರ್ ಅಂತರದಿಂದ ವಿಜಯಪುರ ನಗರವನ್ನು ಸಂಪರ್ಕಕ್ಕೆ ಪಡೆದುಕೊಂಡರು.
ಈ ಪ್ರವಾಹದ ದಟ್ಟನೆ ಅರೀಯದೇ ಆಗಮಿಸಿದ್ದ ಮುದ್ದೇಬಿಹಾಳದ ನ್ಯಾಯವಾದಿಗಳಾದ ಎಂ.ಎನ್.ಯರಗಲ್ಲ, ಪಿ.ಬಿ.ಜಾಧವ, ಎಸ್.ಸಿ.ಹಿರೇಮಠ, ಎನ್.ಆರ್.ಮೋಕಾಸಿ ಅವರು ಸುಮಾರು 80 ಕೀಲೋ ಮೀಟರ್ ಅಂತರದಿಂದ ಮುದ್ದೇಬಿಹಾಳಕ್ಕೆ ತೆರಳಿದರಲ್ಲದೇ ಈ ರಸ್ತೆ ಸಂಪರ್ಕ ಚ್ಯಾಲ ಇದ್ದರೆ ಕೇವಲ 30 ಕೀಲೋ ಮೀಟರ್‌ದಲ್ಲಿ ಮುದ್ದೇಬಿಹಾಳಕ್ಕೆ ಹೋಗುತ್ತಿದ್ದೇವೆಂದು ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರಲ್ಲದೇ ಈ ನದಿಗೆ ಮೇಲ್ಮಟ್ಟದ ಸೇತುವೆಯನ್ನು ತ್ವರಿತಗತಿಯಲ್ಲಿ ನಿರ್ಮಾಣ ಮಾಡಿ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು.