ಮುದ್ದೇಬಿಹಾಳ : ಕೆರೆಯನ್ನು ಅತಿಕ್ರಮಣ ಮಾಡಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನ ಇದ್ದರೂ ಅಲ್ಲಿ ಅತಿಕ್ರಮಣಕಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ.ಬರೀ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದೀರಿ. ಇಂದಿರಾನಗರದಲ್ಲಿ ಬಡವರು ಮನೆಗಳು,ಶೆಡ್‌ಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದ ದಲಿತ ಸಮುದಾಯದವರ ಮೇಲೆ ದೌರ್ಜನ್ಯ ಮಾಡುತ್ತಿದ್ದೀರಿ ಎಂದು ಶಾಸಕ ನಾಡಗೌಡರ ವಿರುದ್ಧ ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಹರಿಹಾಯ್ದರು.
ಪಟ್ಟಣದಲ್ಲಿ ಮಾತನಾಡಿದ ಅವರು, ತಹಶೀಲ್ದಾರ್ ವಿರುದ್ಧವೂ ಏಕವಚನ ಪ್ರಯೋಗಿಸಿ, ಏಯ್ ತಹಶೀಲ್ದಾರ್ ಕತ್ತೆ ಕಾಯ್ತಿದ್ದೀಯಾ ? ಹಿಂದೂಗಳದ್ದಾದರೆ ಒಡೆದು ಹಾಕುವುದು, ಮುಸ್ಲಿಂರದ್ದಾದರೆ ಸುಮ್ಮನೆ ಬಿಡುತ್ತೀರಾ ? ಹತ್ತು ಎಕರೆ ಸ್ಮಶಾನವನ್ನು ಅತಿಕ್ರಮಣ ಮಾಡಿಕೊಂಡಿರುವವರು ಯಾರು ? ಪುರಸಭೆ ಅಧ್ಯಕ್ಷ ಹೇಳಬೇಕು. ತಹಶೀಲ್ದಾರ್‌ರು, ಪೊಲೀಸರು, ಮುಖ್ಯಾಧಿಕಾರಿಗಳಿಗೆ ದಮ್ ಇದ್ದರೆ ಕೆರೆಯ ಅತಿಕ್ರಮಣ ತೆರವು ಮಾಡಿ ಎಂದು ನಡಹಳ್ಳಿ ಖಾರವಾಗಿ ಪ್ರಶ್ನಿಸಿದರು.
ದನದ ಕೊಂಡವಾಡದ ಜಾಗೆಯಲ್ಲಿ ಮದರಸಾ ಶಾಲೆ ನಿರ್ಮಿಸುತ್ತಿದ್ದೀಯಾ ಎಂದು ಪುರಸಭೆ ಅಧ್ಯಕ್ಷರಿಗೆ ಮಾಜಿ ಶಾಸಕರು ಪ್ರಶ್ನಿಸಿದರು. ಇಂದಿರಾ ಸರ್ಕಲ್‌ದಲ್ಲಿ ಒಂದು ಅಂಗಡಿ ತೆರವು ಮಾಡಲಿಲ್ಲ. ಅವರನ್ನು ಮುಟ್ಟಿದರೆ ಅವರು ಇವರಿಗೆ ಒದ್ದು ಕಳಿಸುತ್ತಾರೆ. ಅದಕ್ಕೆ ಅಲ್ಲಿನವರನ್ನು ತೆರವು ಮಾಡಬೇಡಿ ಎಂಬುದು ಶಾಸಕರ ಸೂಚನೆ ಇದೆ.ಬಡವರು, ದಲಿತರು, ಬೀದಿ ಬದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ಮಾಡುವುದನ್ನು ಕೈ ಬಿಡಬೇಕು.ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಮಾಡಬೇಕು.ನನ್ನ ಅವಧಿಯಲ್ಲಿ ಈ ರೀತಿಯ ಚಟುವಟಿಕೆಗಳಿಗೆ ಆಸ್ಪದ ಕೊಟ್ಟಿರಲಿಲ್ಲ ಎಂದು ಹೇಳಿದರು.
ಶಾಸಕ ನಾಡಗೌಡರಿಗೆ ಬಹಿರಂಗ ಸವಾಲು ಹಾಕಿದ ಮಾಜಿ ಶಾಸಕ ನಡಹಳ್ಳಿ ನನ್ನ ಅವಧಿಯಲ್ಲಿ 1500 ಕೋಟಿ ರೂ.ಗಳ ಅಭಿವೃದ್ಧಿ ಬಗ್ಗೆ ದಾಖಲೆಗಳಿದ್ದು ಅವರು ಪತ್ರಿಕಾಗೋಷ್ಠಿ ಮಾಡಿ ಕೇಳಲಿ ಕೊಡುತ್ತೇನೆ.ಒಂದೂವರೆ ವರ್ಷದಲ್ಲಿ ಏನು ತಂದಿದ್ದಾರೆ ಎಂಬುದನ್ನು ಅವರು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಅನಾರೋಗ್ಯದಲ್ಲೂ ನಡಹಳ್ಳಿ ಬೆಂಬಲ: ಕಾಲಿನ ಶಸ್ತçಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿದ್ದರೂ ಶುಕ್ರವಾರ ಎರಡನೇ ದಿನದ ಹೋರಾಟದಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದ ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರು ರೈತಪರ ನಡೆಗೆ ಸಾರ್ವಜನಿಕರ ಮೆಚ್ಚುಗೆ ಪಾತ್ರವಾಯಿತು.