ಬೆಂಗಳೂರು, ಆಗಸ್ಟ್ 13: ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಜಿಲ್ಲೆಗೊಂದರಂತೆ ಶ್ರಮಿಕ ವಸತಿ ಶಾಲೆ ಆರಂಭ ಮಾಡುವುದರ ಉದ್ದೇಶವನ್ನು ಸವಿವರವಾಗಿ ವಿವರಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ವಿರೋಧ ಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿ ಸರ್ಕಾರದ ನಿಲುವಿನ ಬಗ್ಗೆ ತಿಳಿಸಿದರು.
ಕಾರ್ಮಿಕರಿಂದ ಸೆಸ್ ಸಂಗ್ರಹಿಸಿದನ್ನು ಬೇರೆಯವರಿಗೆ, ಬೇರೆ ಇಲಾಖೆಗೆ ನೀಡಲಾಗದು. ಅದಕ್ಕೆ ಅವಕಾಶ ಇಲ್ಲ. ಆದ್ದರಿಂದ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆಗಳನ್ನು ತೆರೆಯುತ್ತಿದ್ದೇವೆ. ಈ ಬಗ್ಗೆ ಸ್ಪಷ್ಟ ನಿರ್ದೇಶನ ಇದೆ ಎಂದು ಸಚಿವ ಲಾಡ್ ಅವರು ಹೇಳಿದರು.
ʼಸಾವಿರಾರು ಕೋಟಿ ಹಣ ಇದೆ ಎಂಬ ಮಾತ್ರಕ್ಕೆ ಜಿಲ್ಲೆಗೊಂದರಂತೆ ವಸತಿ ಶಾಲೆ ತೆರೆಯುತ್ತೀದ್ದೀರಾ? ಎಂಬ ಬಿಜೆಪಿ ಸದಸ್ಯ ಎನ್ ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಲಾಡ್ ಅವರು, ಮಂಡಳಿಯಲ್ಲಿ ಹಣ ಇದೆ ಎಂಬ ಕಾರಣದಿಂದ ವಸತಿ ಶಾಲೆ ಆರಂಭಿಸುತ್ತಿಲ್ಲ. ಎಲ್ಲಾ ಸರ್ಕಾರದಲ್ಲೂ ವಸತಿ ಶಾಲೆ ಆರಂಭವಾಗಿವೆ. ಬಿಸಿಎಂ ಇಲಾಖೆ ಸೇರಿದಂತೆ ಹಲವು ಇಲಾಖೆಯಲ್ಲಿ ವಸತಿ ಶಾಲೆಗಳಿವೆ. ವಸತಿ ಶಾಲೆಗಳನ್ನು ತೆರೆದರೆ ಸರ್ಕಾರಿ ಶಾಲೆಗಳು ಮುಚ್ಚುತ್ತವೆ ಎಂಬ ಭಯ ಬೇಡ. ಹಾಗಾದರೆ ಯಾವುದೇ ಇಲಾಖೆಯಿಂದ ವಸತಿ ಶಾಲೆ ಆರಂಭಿಸಬಾರದೇ ಎಂದು ಪ್ರಶ್ನೆ ಮಾಡಿದರು.
ಸದನದಲ್ಲಿ ಸುಳ್ಳು ಮಾತನಾಡಲಾಗದು. ಸುಳ್ಳು ಮಾಹಿತಿ ನೀಡಲಾಗದು. ಆದ್ದರಿಂದ ಸರ್ಕಾರದ ನಿಯಮಾವಳಿಗಳು ಏನಿವೆ ಅದರಂತೆ ಕೆಲಸ ಮಾಡಬೇಕು. ನಿರ್ಮಾಣ ಕಾರ್ಮಿಕರು ಕೆಲಸಕ್ಕಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ವಲಸೆ ಹೋಗ್ತ ಇರುತ್ತಾರೆ. ಅವರು ಮಕ್ಕಳನ್ನು ಒಂದು ನಿಗದಿತ ವಸತಿ ಶಾಲೆಯಲ್ಲಿ ದಾಖಲು ಮಾಡಿದರೆ ಅನುಕೂಲವಾಗಲಿದೆ. ಎಲ್ಲರಿಗೂ ಇರುವ ಕಾಳಜಿಯಂತೆಯೇ ನಮಗೂ ಇದೆ ಎಂದರು.
ಬೇರೆ ಉದ್ದೇಶಕ್ಕೆ ಸೆಸ್ ಬಳಕೆಗೆ ಅವಕಾಶ ಇಲ್ಲ:
ಯಾವ ಉದ್ದೇಶಕ್ಕಾಗಿ ಸೆಸ್ ಸಂಗ್ರಹ ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಬಳಸಬೇಕು ಎಂಬ ನಿಯಮ ಇದೆ. ಬೇರೆ ಇಲಾಖೆಗೆ ಹಾಗೂ ಬೇರೆಯವರಿಗೆ ಅದನ್ನು ಕೊಡಲಾಗದು. ಸಾರಿಗೆಯಿಂದ ಸೆಸ್ ಸಂಗ್ರಹಿಸಿದರೆ ಅದನ್ನು ಅಸಂಘಟಿತ ಕಾರ್ಮಿಕರಿಗೆ ಕೊಡಲು ಬರಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಸಹ ಹೇಳಿದೆ ಎಂದು ವಿವರಿಸಿದರು.
ನಮ್ಮಲ್ಲಿ ಹಾಸ್ಟೆಲ್‌ಗೆ ಸಾಕಷ್ಟು ಬೇಡಿಕೆ ಇದೆ. ಹುಬ್ಬಳ್ಳಿ-ಧಾರವಾಡದಲ್ಲಿ ಇನ್ನಷ್ಟು ಹಾಸ್ಟೆಲ್ ಬೇಕು ಎಂದು ಮಕ್ಕಳು ಕರೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ಮಾಡಿದರೆ ಅನುಕೂಲವಾಗಲಿದೆ. ಒಟ್ಟಿನಲ್ಲಿ ಹಣ ಸದುಪಯೋಗ ಮಾಡಬೇಕು. ಕೆಲವು ಹಾಸ್ಟೆಲ್ ಪ್ರವೇಶಕ್ಕೆ ಪರೀಕ್ಷೆ ಇದೆ. ಪ್ರತಿಭಾವಂತರು ಮಾತ್ರವೇ ಅಲ್ಲಿ ಪ್ರವೇಶ ಪಡೆಯುತ್ತಾರೆ. ನಿರ್ಮಾಣ ಕ್ಷೇತ್ರದಲ್ಲಿನ ಗೋಡೆ ಕಟ್ಟುವವರು, ಪೇಂಟರ್, ಬಡಗಿಗಳ ಮಕ್ಕಳಿಗೆ ಒಳ್ಳೆಯ ಹಾಸ್ಟೆಲ್ ಸಿಕ್ಕರೆ ಅವರು ಓದುತ್ತಾರೆ ಎಂದರು.
ನಮ್ಮಲ್ಲಿ ಹಣ ಇದೆ. ಕಳೆದ ಮೂರು ವರ್ಷದಲ್ಲಿ ೧೪ ಲಕ್ಷ ಮಕ್ಕಳಿಗೆ ಪ್ರೋತ್ಸಾಹಧನ ಕೊಟ್ಟಿದ್ದೇವೆ. ಕೋಟ್ಯಂತರ ಹಣ ಬರ್ತಾ ಇದೆ, ಅದು ಸರಿಯಾಗಿ ಬಳಕೆ ಆಗಬೇಕು ಎಂದು ವಿವರಿಸಿದರು.
ಇಲಾಖೆಯಿಂದ ಕೌಶಲ್ಯ ಕೇಂದ್ರ ಆರಂಭ:
ಕಟ್ಟಡ ಕಾರ್ಮಿಕರ ಮಕ್ಕಳ ಅನುಕೂಲಕ್ಕಾಗಿ ಧಾರವಾಡ ಮತ್ತು ಮೈಸೂರಿನಲ್ಲಿ ಕೌಶಲ್ಯ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಇಂದಿನ ಉದ್ಯೋಗಕ್ಕೆ ಬೇಕಾದ ಕೌಶಲ ತರಬೇತಿ ನೀಡುತ್ತೇವೆ. ಕೇವಲ ಪ್ರಮಾಣ ಪತ್ರ ಕೊಟ್ಟರೆ ಪ್ರಯೋಜನ ಇಲ್ಲ. ತರಬೇತಿ ಕಾಲಕಾಲಕ್ಕೆ ಬದಲಾಗುತ್ತವೆ. ಈ ತರಬೇತಿಯನ್ನ ಸರ್ಕಾರ ಕೊಡಲ್ಲ. ಉದ್ಯಮದವರೇ ಕೊಡ್ತಾರೆ. ಅವರೇ ಸಿಲಬಸ್ ಕೊಡ್ತಾರೆ. ಸರ್ಕಾರ ಕೊಡಲ್ಲ ʼಉದ್ಯಮದವರೇ ತರಬೇತಿ ಕೊಡತಾರೆ. ಅಂತರರಾಷ್ಟ್ರೀಯ ಮಟ್ಟದ ತರಬೇತಿಯನ್ನು ನಾವು ಕೊಡ್ತಿವಿ ಎಂದರು.
ನಾವು ವೈರಿಗಳಲ್ಲ, ಸಲಹೆ ನೀಡಿ: ಯಾವುದೇ ವಿಷಯದ ಬಗ್ಗೆ ಸಲಹೆ ನೀಡಿ. ಮುಕ್ತ ಹೃದಯದಿಂದ ನಾವು ಅದನ್ನು ಸ್ವೀಕರಿಸುತ್ತೇವೆ. ನಾವು ಯಾರೂ ವೈರಿಗಳಲ್ಲ. ಟೀಕೆ ಮಾಡಿದರೆ ವೈಷಮ್ಯ ಮಾಡಲ್ಲ. ಗೌರವಿಸುತ್ತೇನೆ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಸದಸ್ಯ ಬೋಜೆಗೌಡ ಅವರು, ಕಾರ್ಮಿಕ ಸಚಿವರು ಒಳ್ಳೆಯ ಕೆಲಸ ಮಾಡ್ತಾ ಇದ್ದೀರಿ. ಕಾರ್ಮಿಕರ ಮಕ್ಕಳು ಕಾರ್ಮಿಕರೇ ಆಗಬೇಕಿಲ್ಲ. ಅವರೂ ಒಳ್ಳೆಯ ತರಬೇತಿ ಪಡೆಯಲಿ. ವಿದ್ಯಾವಂತರಾಗಲಿ ಎಂದರು.