ಮುದ್ದೇಬಿಹಾಳ : ಹಿಂದುತ್ವಕ್ಕೆ ಸವಾಲು,ಸಮಸ್ಯೆ ಎದುರಾದಾಗ ಆರ್.ಎಸ್.ಎಸ್ ಮುಂಚೂಣಿಯಲ್ಲಿ ನಿಂತು ಹಿಂದೂ ಸಮಾಜವನ್ನು ಒಗ್ಗೂಡಿಸಿ ಹೋರಾಟ ನಡೆಸಲು ಪ್ರೇರಣಾ ಶಕ್ತಿಯಾಗಿದೆ ಎಂದು ಆರ್.ಎಸ್.ಎಸ್ ಉತ್ತರ ಕರ್ನಾಟಕ ಪ್ರಾಂತ ಕಾರ್ಯಕಾರಣಿ ಸದಸ್ಯ ಅರವಿಂದರಾವ ದೇಶಪಾಂಡೆ ಹೇಳಿದರು.
ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದ ಸಿದ್ದೇಶ್ವರ ವೇದಿಕೆ ಮುಂಭಾಗದಲ್ಲಿ ಶನಿವಾರ ಆರ್.ಎಸ್.ಎಸ್ ಪಥಸಂಚಲನದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಆರ್.ಎಸ್.ಎಸ್ ಮುಸಲ್ಮಾನರ ವಿರೋಧಿ ಎಂದು ಬಿಂಬಿಸಲಾಗುತ್ತದೆ.ಆದರೆ ಸಂಘದಲ್ಲಿ ಬಂದರ‍್ಯಾರು ಅದನ್ನು ಒಪ್ಪಿಲ್ಲ.ಸಂಘದಲ್ಲೂ ಮುಸ್ಲಿಂ ಬಾಂಧವರು ಇದ್ದಾರೆ. ದೇಶವನ್ನು ಮಾತೃಭೂಮಿ, ತಾಯಿ ಎಂದು ಭಾವಿಸಿದವರು, ಭಾರತ ಮಾತಾಕೀ ಜೈ ಎಂದು ಹೇಳುವವರು ಅವರೆಲ್ಲರೂ ಹಿಂದೂಗಳು.ಪೂಜಾ ಪದ್ಧತಿ, ಧರ್ಮ,ಆಚರಣೆಗಳು ಏನೇ ಇದ್ದರೂ ಅವರು ಹಿಂದೂಗಳೇ ಆಗಿದ್ದಾರೆ.ಇಂಡೋನೇಷ್ಯಾದಲ್ಲಿ ಶೇ.95ರಷ್ಟು ಮುಸ್ಲಿಂರಿದ್ದರೂ ಅಲ್ಲಿನ ಏರಲೈನ್ ಹೆಸರು ಗರುಡಾ ಏರಲೈನ್ಸ್ ಎಂದು ಇರಿಸಲಾಗಿದೆ.ಏರಪೋರ್ಟ್ನಲ್ಲಿ ರಾಮಾಯಣದ ದೃಶ್ಯಗಳನ್ನು ಅಳವಡಿಸಲಾಗಿದೆ.ಹಿಂದೂ ಮಂದಿರಗಳ ಮೇಲೆ, ಹಿಂದೂ ಸಮಾಜದ ಮೇಲೆ ಸಮಸ್ಯೆ ಆದಾಗ ಆರ್.ಎಸ್.ಎಸ್ ಅಲ್ಲಿರುತ್ತದೆ ಎಂದರು.
ಶಿವಾಜಿ ಮಹಾರಾಜರಂತಹ ವ್ಯಕ್ತಿ ಹಿಂದವೀ ಸಮಾಜ ಕಟ್ಟಿದ್ದರಿಂದ ಹಿಂದೂಗಳು ಉಳಿದಿದ್ದೇವೆ. ಸಂಘ ಆಸ್ಪತ್ರೆ, ರಕ್ತನಿಧಿ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಸಮಾಜದಲ್ಲಿ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. 1990ರ ನಂತರ ಹಿಂದುತ್ವಕ್ಕೆ ದೇಶದಲ್ಲಿ ಜಗತ್ತಿನಲ್ಲಿ ಮಾನ್ಯತೆ ದೊರೆಯುತ್ತಿದೆ.ಹಿಂದೆ ನಾವೆಲ್ಲ ಹಿಂದೂ ಎಂದು ಹೇಳಿಕೊಳ್ಳುತ್ತಿರಲಿಲ್ಲ.ಈಗ ನಾವು ದೇಶದ ಮೂಲೆ ಮೂಲೆಯಲ್ಲಿ ಹಿಂದೂ ಎಂದು ಹೇಳಿಕೊಳ್ಳುವಂತಾಗಿದೆ. ಜಗತ್ತಿನ ವಿವಿಧ ರಾಷ್ಟçಗಳಲ್ಲಿ ಐದು ಕೋಟಿ ಜನ ಹಿಂದೂಗಳಿದ್ದು ಅವರನ್ನು ಒಗ್ಗೂಡಿಸಿ ಶಕ್ತಿ ತುಂಬ ಕೆಲಸ ಆರ್.ಎಸ್.ಎಸ್ ಮಾಡುತ್ತಿದೆ.ಈಗಾಗಲೇ 52 ದೇಶಗಳಲ್ಲಿ ಸಂಘದ ಕೆಲಸ ನಡೆಯುತ್ತಿದೆ ಎಂದರು.
ಗಣ್ಯ ವರ್ತಕ ಬಿ.ಸಿ.ಮೋಟಗಿ ವೇದಿಕೆಯಲ್ಲಿದ್ದರು.ವಿನೋದ ಮಡಿವಾಳರ ಪ್ರಾರ್ಥನಾ ಗೀತೆ ಹಾಡಿದರು.ಗಿರೀಶ ದೇಶಪಾಂಡೆ ಸ್ವಾಗತಿಸಿದರು. ಪ್ರಭು ನಂದೆಪ್ಪನವರ ಹಾಗೂ ರಾಘವೇಂದ್ರ ಕುಲಕರ್ಣಿ ನಿರೂಪಿಸಿದರು.ಚೇತನ ಮಾಗನೂರ ವಂದಿಸಿದರು.