
ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನಲ್ಲಿ ಏ.5 ರಂದು ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಪರೀಕ್ಷೆ-2025 ನ್ನು ಹಮ್ಮಿಕೊಳ್ಳಲಾಗಿದ್ದು ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ ಗುರುವಾರ ಸುದ್ದಿಗೋಷ್ಠಿಯಲ್ಲಿ ಪರೀಕ್ಷೆಯ ವಿವರಗಳನ್ನು ಅವರು ನೀಡಿದರು. ಸಂಸ್ಥೆಯ ಚೇರಮನ್ ಎಂ. ಎಸ್. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಈ ಬಾರಿ ಎರಡು ಬಾರಿ ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಪರೀಕ್ಷೆ ನಡೆಸಲಾಗುತ್ತಿದ್ದು ಡಿ. 22, 2024 ರಂದು ಸ್ಕಾಲರ್‌ಶಿಪ್ ಪರೀಕ್ಷೆ ನಡೆಸಿ ಎರಡು ಕೋಟಿ ರೂ. ವರೆಗೂ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಏ. 5 ರಂದು ಬೆಳಗ್ಗೆ 10ಕ್ಕೆ ನಡೆಯುವ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವ ವಿದ್ಯಾರ್ಥಿಗೆ 75 ಸಾವಿರ ರೂ., ಎರಡನೇ ಸ್ಥಾನ 50 ಸಾವಿರ ರೂ., ಮೂರನೇ ಸ್ಥಾನ 30 ಸಾವಿರ ರೂ., ನಾಲ್ಕನೇ ಸ್ಥಾನ 15 ಸಾವಿರ ರೂ., ಐದನೇ ಸ್ಥಾನ 10 ಸಾವಿರ ರೂ., ಆರನೇ ಸ್ಥಾನ ಪಡೆದುಕೊಳ್ಳುವ ವಿದ್ಯಾರ್ಥಿಗೆ ಐದು ಸಾವಿರ ರೂ. ಹಾಗೂ ಅತೀ ಹೆಚ್ಚು ಅಂಕ ಪಡೆದುಕೊಳ್ಳುವ ಮೊದಲ ಹತ್ತು ವಿದ್ಯಾರ್ಥಿಗಳಿಗೆ ತಲಾ 2500 ರೂ. ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.
ಪ್ರಶ್ನೆ ಪತ್ರಿಕೆ ಸ್ವರೂಪದ ಬಗ್ಗೆ ವಿವರಣೆ ನೀಡಿದ ಅಮೀತಗೌಡ ಅವರು, ಒಂದು ತಾಸಿನ ಅವಧಿಯ ಪರೀಕ್ಷೆ ಇದಾಗಿದ್ದು 60 ಅಂಕಗಳಿರುತ್ತವೆ. ಬಹುಆಯ್ಕೆ ವಸ್ತುನಿಷ್ಠ ಪ್ರಶ್ನೆಗಳಿರುತ್ತಿದ್ದು ಪ್ರತಿ ತಪ್ಪು ಉತ್ತರಕ್ಕೂ ಒಂದು ಅಂಕ ಕಡಿತಗೊಳಿಸಲಾಗುತ್ತದೆ. ಇಂಗ್ಲಿಷ್ ಗ್ರಾಮರ, ವಿಜ್ಞಾನ, ಗಣಿತ ವಿಷಯ ಒಳಗೊಂಡಿರುವ ಪ್ರಶ್ನೆ ಪತ್ರಿಕೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿರುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು, ಪಾಲಕರು ತಮಗೆ ಸರಿ ಎನ್ನಿಸುವ ಶಿಕ್ಷಣ ಸಂಸ್ಥೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಒಳ್ಳೆಯ ಸಂಸ್ಥೆ ಎಂದರೆ ಒಳ್ಳೆಯ ಫಲಿತಾಂಶ ಕೊಟ್ಟಿರುವುದನ್ನು ಗಮನಿಸಬೇಕು. 2024ರಲ್ಲಿ 172 ವಿದ್ಯಾರ್ಥಿಗಳು ಮೆಡಿಕಲ್ ಸೀಟು ಪಡೆದುಕೊಂಡಿದ್ದು ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರುಗಳನ್ನು ಮೊ. 9380095756ಗೆ ವಾಟ್ಸಾಪ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9380095756, 7483147040 ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕ ದರ್ಶನಗೌಡ ಪಾಟೀಲ್, ಶಿಕ್ಷಕರಾದ ರಾಜಶೇಖರ ಹಿರೇಮಠ, ಪರಶುರಾಮ ಹೂಗಾರ ಉಪಸ್ಥಿತರಿದ್ದರು.