ಮುದ್ದೇಬಿಹಾಳ: ಪಟ್ಟಣದ ಕೆಜಿಎಸ್ ನಂ.2 ಶಾಲೆಯ ಆವರಣದಲ್ಲಿದ್ದ ಬೃಹತ್ ಆಲದ ಮರದ ರೆಂಬೆ ಕೊಂಬೆಗಳು ಬಜಾರ್‌ದಲ್ಲಿ ಅಂಗಡಿಗಳಿಗೆ ಸಂಪರ್ಕ ಇದ್ದ ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದ ಕಾರಣ ಅದನ್ನು ಭಾನುವಾರ ಹೆಸ್ಕಾಂ ಕಾರ್ಮಿಕರು ಸುರಿಯುವ ಮಳೆಯನ್ನೂ ಲೆಕ್ಕಿಸದೇ ತೆರವುಗೊಳಿಸುವ ಕಾರ್ಯ ಕೈಗೊಂಡರು.
ಪಟ್ಟಣದ ಮುಖ್ಯರಸ್ತೆಯಲ್ಲಿರುವ ಅಂಗಡಿಗಳಿಗೆ ಈ ಮರದ ಅಕ್ಕಪಕ್ಕದ ವಿದ್ಯುತ್ ಕಂಬಗಳಿಂದ ಸಂಪರ್ಕ ನೀಡಲಾಗಿದ್ದು ಮಳೆ, ಗಾಳಿ ಬಿಟ್ಟರೆ ವಿದ್ಯುತ್ ಶಾರ್ಟ್ ಸರ್ಕಿಟ್ ಸಂಭವಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಮರದ ರೆಂಬೆ ಕೊಂಬೆಗಳನ್ನು ಮರದ ಅರ್ಧ ಭಾಗವನ್ನು ಕತ್ತರಿಸಿ ವಿದ್ಯುತ್ ಪೂರೈಕೆಗೆ ಅಡಚಣೆಯಾಗಿದ್ದ ಮರದ ಬೃಹತ್ ರೆಂಬೆಯನ್ನು ತೆರವುಗೊಳಿಸಲಾಯಿತು.
ಸಂಜೆ ಸಮಯದಲ್ಲಿ ಜೋರಾಗಿ ಮಳೆ ಸುರಿಯುತ್ತಿದ್ದರೂ ತಂತಿಗಳನ್ನು ಜೋಡಿಸುವ ಕಾರ್ಯವನ್ನು ಹೆಸ್ಕಾಂ ನೌಕರರು, ಗುತ್ತಿಗೆ ನೌಕರರು ಕೈಗೊಂಡರು. ಹೆಸ್ಕಾಂ ಪ್ರಭಾರ ಸೆಕ್ಷನ್ ಅಧಿಕಾರಿ ನಾಗರಾಜ ಬಸರಕೋಡ, ಗುತ್ತಿಗೆದಾರ ಅಪ್ಪುಗೌಡ ಮಾಡಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಮುದ್ದೇಬಿಹಾಳದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.