ಮುದ್ದೇಬಿಹಾಳ : ಮತಕ್ಷೇತ್ರದಲ್ಲಿ ಹಿಂದಿನ ಸರ್ಕಾರದಲ್ಲಿ ಗುತ್ತಿಗೆ ಕೆಲಸಗಳನ್ನು ಪಡೆದಿರುವ ನಾಲ್ವರು ಗುತ್ತಿಗೆದಾರರು ಹಿಡಿದ ಕೆಲಸವನ್ನು ಪೂರ್ಣಗೊಳಿಸದೇ ನಿರಾಸಕ್ತಿ ತೋರುತ್ತಿದ್ದು ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹುನ್ನಾರ ನಡೆಸಿದ್ದಾರೆ. ಅಂತವರು ಕೆಲಸ ತ್ವರಿತವಾಗಿ ಆರಂಭಿಸದಿದ್ದರೆ ಅವರನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಶಾಸಕ ಸಿ. ಎಸ್. ನಾಡಗೌಡ ಹೇಳಿದರು.
ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈಗಾಗಲೇ ಎರಡ್ಮೂರು ಬಾರಿ ಕೆಲಸ ಮಾಡದ ಗುತ್ತಿಗೆದಾರರಿಗೆ ನಿರ್ದೇಶನ ಮಾಡಿದ್ದರೂ ಕೂಡಾ ಕೆಲಸ ಕೈಗೆತಿಕೊಳ್ಳುತ್ತಿಲ್ಲ. ಸನ್ 2022-23ರಲ್ಲಿ ಈ ಗುತ್ತಿಗೆದಾರರಿಗೆ ಯಾವ ರೀತಿ ಕೆಲಸ ನೀಡಲಾಗಿತ್ತು ಗೊತ್ತಿಲ್ಲ. ಆದರೆ, ಅವರು ಕೆಲಸ ಮಾಡುತ್ತಿಲ್ಲ. ಒಂದು ವೇಳೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಸ್ವತಃ ಲೋಕಾಯುಕ್ತ ತನಿಖೆಗೂ ನಾವೇ ದೂರು ನೀಡುತ್ತೇವೆ ಎಂದು ಹೇಳಿದರು.
ಚೋರಗಿ, ಬಿ. ಎಸ್. ಪಾಟೀಲ ವಣಕ್ಯಾಳ, ಹೇಮಚಂದ್ರ ಸಂಗಮ, ಬಿ. ಎಸ್. ಪಾಟೀಲ ಎಂಬುವರು ಗುತ್ತಿಗೆ ಕೆಲಸವನ್ನು ಪಡೆದಿದ್ದಾರೆ. ಆದರೆ ಅರ್ಧಮರ್ಧ ಕೆಲಸ ಮಾಡಿ ಬಾಕಿ ಕೆಲಸವನ್ನು ಮಾಡದೇ ತಟಸ್ಥವಾಗಿದ್ದಾರೆ. ಬಿ. ಎಸ್. ಪಾಟೀಲ ವಣಕ್ಯಾಳ ಎಂಬ ಗುತ್ತಿಗೆದಾರರಿಗೆ 7.93 ಕೋಟಿ ರೂ. ಕೆಲಸದಲ್ಲಿ ಸುಮಾರು 90 ಲಕ್ಷ ರೂ.ದಷ್ಟು ಮುಂಗಡ ಬಿಲ್ ಪಾವತಿ ಮಾಡಲಾಗಿದೆ. ಆದರೆ ಬಾಕಿ ಇರುವ ತಾಳಿಕೋಟಿ, ಮುದ್ದೇಬಿಹಾಳದ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಆರೋಪಿಸಿದರು.
ಕೆಲಸ ಮಾಡಲು ಗುತ್ತಿಗೆದಾರರಿಗೆ ನೀಡಿದ್ದ ನಿಗದಿತ ಸಮಯ ಮುಗಿದುಹೋಗಿದೆ. ಕಾರಣ ಏನೆಂಬುದು ತಿಳಿಯುತ್ತಿಲ್ಲ. ಜನ ಸಾಮಾನ್ಯರ ಕೆಲಸಕ್ಕೆ ತೊಂದರೆ ಮಾಡುವಂತಹ ಕೆಲಸ ಈ ಗುತ್ತಿಗೆದಾರರು ಮಾಡುತ್ತಿದ್ದಾರೆ. ನಾನು ಮತಕ್ಷೇತ್ರದಲ್ಲಿ ಯಾವುದೇ ಕೆಲಸ ನಿಲ್ಲಿಸುವಂತೆ ಹೇಳಿಲ್ಲ. ನನ್ನ 40 ವರ್ಷದ ರಾಜಕಾರಣದಲ್ಲಿ ಇಂತಹ ಕನಿಷ್ಠಮಟ್ಟಕ್ಕೆ ಇಳಿಯುವಂತಹ ಕೆಲಸ ಮಾಡಿಲ್ಲ ಎಂದು ಹೇಳಿದರು.
ರಿಸ್ಕ್ ಅಂಡ್ ಕಾಸ್ಟ್ ಮಾಡಿ ಸಂಬಂಧಿಸಿದ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಕ್ರಮ ಜರುಗಿಸಲಾಗುವುದು. ಮುದ್ದೇಬಿಹಾಳ ಪುರಸಭೆಯಲ್ಲಿ ಪ್ರತ್ಯೇಕ ಪ್ಯಾಕೇಜ್ ಅಡಿ 7 ಕೋಟಿ ರೂ.ಗೂ ಅಧಿಕ ಮೊತ್ತದ ಕೆಲಸ ಹಿಡಿದಿದ್ದ ಚೋರಗಿ ಎಂಬ ಗುತ್ತಿಗೆದಾರ ಕೆಲಸ ಮಾಡದೇ ಕಾಣೆಯಾಗಿದ್ದಾರೆ. ಈಗಾಗಲೇ ಅವರಿಗೆ 1 ಕೋಟಿ ರೂ ಅಧಿಕ ಬಿಲ್ ಪಾವತಿಸಲಾಗಿದೆ ಎಂದು ಹೇಳಿದರು.
ಮುದ್ದೇಬಿಹಾಳ, ತಾಳಿಕೋಟಿ, ನಾಲತವಾಡದಲ್ಲಿ ಕೆಲಸಗಳನ್ನು ನಿಲ್ಲಿಸಿ ಕಾಂಗ್ರೆಸ್ ಸರ್ಕಾರ ಬಂದು ಕೆಲಸ ನಿಲ್ಲಿಸಿತು ಎಂದು ಕೆಟ್ಟ ಹೆಸರು ತರಲು ಕುತಂತ್ರಗಳು ನಡೆದಿವೆ. ಈ ಕೆಲಸಗಳನ್ನು ಹಿಡಿದವರೆಲ್ಲ ಕಟ್ಟಾ ಬಿಜೆಪಿ ಫಾಲೋವರ್ಸ್ ಇದ್ದಾರೆ. ರಾಜಕಾರಣ ಮಾಡುವುದಿದ್ದರೆ ರಾಜಕಾರಣ ಮಾಡಿ. ಅದು ಬಿಟ್ಟು ಈ ರೀತಿ ಗುತ್ತಿಗೆ ಹಿಡಿದು ಕೆಲಸ ಮಾಡದೇ ಜನಸಾಮಾನ್ಯರಿಗೆ ತೊಂದರೆ ಕೊಡುವುದು, ಅಭಿವೃದ್ಧಿ ರಾಜಕಾರಣದಲ್ಲಿ ಅಡತಡೆಯನ್ನುಂಟು ಮಾಡುವ ಕ್ರಮ ಸರಿಯಲ್ಲ ಎಂದು ಹೇಳಿದರು.