ರಾಯಚೂರು, ಮಾ.11- ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಸಂಘರ್ಷ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಿನ್ನೆ ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಮತ್ತು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸಮ್ಮುಖದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರ ನಡುವೆ ಜಟಾಪಟಿ ನಡೆದಿರುವುದು ಬಹಿರಂಗವಾಗಿ ಎಲ್ಲೆಡೆ ಚರ್ಚೆಯಾಗುತ್ತಿದೆ. ಡಿಸಿಎಂ ಸೇರಿದಂತೆ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಜರಿದ್ದ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮತ್ತು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹಾಗೂ ಕೊಡುಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಎಸ್. ಬೋಸರಾಜು ನಡುವೆ ಉನ್ನತ ಪೊಲೀಸ್ ಅಧಿಕಾರಿಯೋರ್ವರ ವರ್ಗಾವಣೆ ಸಂಬಂಧಿಸಿದಂತೆ ಉಭಯ ಸಚಿವರ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎರೆಡು ಬಣಗಳಿವೆ ಎಂಬುದು ಗುಟ್ಟಾಗಿ ಉಳಿದಿಲ್ಲ ಸರ್ಕಾರ ರಚನೆ ನಂತರ ಸಚಿವ ಸಂಪುಟದಲ್ಲಿ ಸೇರ್ಪಡೆ, ನಿಗಮ- ಮಂಡಳಿ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ, ನಾಮನಿರ್ದೇಶನ ಸದಸ್ಯರ, ಗ್ಯಾರಂಟಿ ಅನುಷ್ಟಾನ ಸಮಿತಿಯ ನೇಮಕ ಸಂದರ್ಭ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ ಎಷ್ಟರ ಮಟ್ಟಿಗೆ ಇದು ಮುಟ್ಟಿದೆ ಎಂದರೆ ಕಾರ್ಯಕ್ರಮವೊಂದರಲ್ಲಿ ಮಹಾನಗರ ಪಾಲಿಕೆ ಮಹಾಪೌರರ ಹೆಸರು ಹೇಳುವುದನ್ನು ಸಚಿವರು ಉದ್ಧೇಶ ಪೂರ್ವಕವಾಗಿ ಬಿಟ್ಟಿದ್ದಾರೆ ಎಂಬುದು ಅಸಮಾಧಾನಕ್ಕೆ ಆಸ್ಪದ ನೀಡಿತ್ತು.
ಅಡಿಯಿಂದ ಮುಡಿಯವರೆಗೆ ಬಣ ರಾಜಕೀಯ ಕಲಹ ನಡೆಯುತ್ತಾ ಸಾಗಿದೆ ಹೈಕಮಾಂಡ್ ಈ ಬಗ್ಗೆ ಅಸಹಾಯಕ ಸ್ಥಿತಿಯಲ್ಲಿದೆ ಎಂಬ ಅನುಮಾನ ಪಕ್ಷದ ತಟಸ್ಥ ಕಾರ್ಯಕರ್ತರಲ್ಲಿ ಮೂಡಿದೆ. ಬಣ ರಾಜಕೀಯಕ್ಕೆ ನಾಂದಿ ಹಾಡಿದ್ದು ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಪ್ರಮುಖ ಕಾರಣವಾಗಿದೆ ಸ್ಥಳೀಯ ಸಚಿವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡದೆ ಅನ್ಯ ಜಿಲ್ಲೆಯವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದರಿಂದ ಬಣ ರಾಜಕೀಯ ಸಂಘರ್ಷ ಬೂದಿ ಮುಚ್ಚಿದ ಕೆಂಡದಂತಿದೆ ಕೆಲವೊಮ್ಮೆ ಅದು ಧಗಧಗನೆ ಉರಿಯುತ್ತದೆ.
ಬಣ ಬೆಂಕಿ ನಂದಿಸಲು ಸಾಧ್ಯವಾಗದೆ ಪಕ್ಷಕ್ಕೆ ಮುಜುಗರಕ್ಕೀಡು ಮಾಡುವ ಸನ್ನಿವೇಶ ಎದುರುಗಾತ್ತಿರುತ್ತದೆ ನಿನ್ನೆ ನಡೆದಿದೆ ಎನ್ನಲಾದ ಸಚಿವರ ನಡುವಿನ ಜಟಾಪಟಿಗೆ ವರ್ಗಾವಣೆ ಒಂದು ಕಾರಣವೆಂದು ಹೇಳಲಾಗುತ್ತಿದ್ದರೂ ಆಂತರಿಕವಾಗಿ ಜಿಲ್ಲೆಯಲ್ಲಿ ಹಿಡಿತ ಸಾಧಿಸುವುದಕ್ಕಾಗಿ ಎನ್ನುವುದು ರಾಜಕೀಯ ವಲಯದಿಂದ ಕೇಳಿಬರುತ್ತಿದೆ