ಮುದ್ದೇಬಿಹಾಳ : ಗ್ರಾಮದ ದೇವತೆ ಜಾತ್ರೆಯ ಸಮಯದಲ್ಲಿ ಪಟ್ಟಣದ ಲಕ್ಷ್ಮಿ ಚಿತ್ರಮಂದಿರದ ಎದುರಿಗೆ ಇರುವ ತಾಪಂ ವಸತಿ ಗೃಹಗಳನ್ನು ನೆಲಸಮ ಮಾಡಿದ ಘಟನೆ ಇದೀಗ ಹೊಸ ವಿವಾದವನ್ನು ಹುಟ್ಟು ಹಾಕಿದ್ದು ದಲಿತಪರ ಸಂಘಟನೆಯವರು ಗುರುವಾರ ತಾಪಂ ಕಚೇರಿ ಎದುರಿಗೆ ಧರಣಿ ನಡೆಸಿದ್ದು ವಸತಿಗೃಹಗಳನ್ನು ನೆಲಸಮ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ತಾಪಂ ಕಚೇರಿ ಆವರಣದಲ್ಲಿ ನಡೆದ ಧರಣಿ ಸ್ಥಳದಲ್ಲಿ ಹೋರಾಟಗಾರರನ್ನು ಭೇಟಿ ಮಾಡಿದ ತಾಪಂ ಇಒ ನಿಂಗಪ್ಪ ಮಸಳಿ, ವಸತಿ ಗೃಹಗಳನ್ನು ನೆಲಸಮಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡುವಂತೆ ಪುರಸಭೆ ಮುಖ್ಯಾಧಿಕಾರಿ ಹೆಸರಿನಲ್ಲಿ ಬರೆದಿರುವ ನೋಟಿಸ್‌ನ್ನು ತಾಪಂ ಇಒ ಹೋರಾಟಗಾರರಿಗೆ ಹಸ್ತಾಂತರ ಮಾಡುವ ಮೂಲಕ ತಾತ್ಕಾಲಿಕವಾಗಿ ಪ್ರತಿಭಟನಾಕಾರರನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಿದ್ದಾರೆ.
ನೋಟಿಸಿನಲ್ಲೇದೆ ?: ತಾಪಂ ಇಒ ನಿಂಗಪ್ಪ ಮಸಳಿ ಜಾರಿ ಮಾಡಿರುವ ನೋಟಿಸಿನಲ್ಲಿ, ದಿನಾಂಕ 30-5-2025ರಿಂದ 30-6-2025ರವರೆಗೆ ಜರುಗಿದ ಮುದ್ದೇಬಿಹಾಳ ಪಟ್ಟಣದ ಗ್ರಾಮದೇವತೆ ಜಾತ್ರೆ ನಿಮಿತ್ಯ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭದಲ್ಲಿ ನಮ್ಮ ಕಾರ್ಯಾಲಯಕ್ಕೆ ಸಂಬಂಧಿಸಿದ ತಾಲ್ಲೂಕ ಪಂಚಾಯತ ವಸತಿ ಗೃಹ ಹಾಗೂ ಸಾಮರ್ಥ್ಯ ಸೌಧ ಕಟ್ಟಡವನ್ನು ಕೆಡವಿರುತ್ತೀರಿ. ಅಪಾರ ಪ್ರಮಾಣದ ಬೆಲೆ ಬಾಳುವ ಆಸ್ತಿಯನ್ನು ಹಾನಿ ಮಾಡಿದ್ದೀರಿ. ಸದರಿ ಸ್ಥಳವನ್ನು ಸಮುಚಿತ ಮಾರ್ಗದಲ್ಲಿ ಅನುಮತಿ ಪಡೆಯದೇ ಗ್ರಾಮದೇವತಾ ಜಾತ್ರಾ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ಬಳಸಿಕೊಂಡಿದ್ದಲ್ಲದೇ ವಸತಿ ಗೃಹ ಹಾಗೂ ಸಾಮರ್ಥ್ಯ ಸೌಧ ಕಟ್ಟಡವನ್ನು ಕೆಡವಿ ಅಪಾರ ಪ್ರಮಾಣದ ಸರಕಾರಿ ಆಸ್ತಿಯನ್ನು ಹಾನಿ ಮಾಡಿದ್ದೀರಿ.ನಮ್ಮ ಗಮನಕ್ಕೆ ತರದೇ ಮನರಂಜನಾ ಕಾರ್ಯಕ್ರಮಕ್ಕಾಗಿ ಸದರ ಸ್ಥಳವನ್ನು ವಿರೂಪಗೊಳಿಸುವ ಕೆಡವಿ ಹಾಕುವ ಪೂರ್ವದಲ್ಲಿ ಅಥವಾ ಕಾರ್ಯಕ್ರಮ ಆಯೋಜಿಸುವ ಸಂದರ್ಭದಲ್ಲಿ ನಮ್ಮ ಕಾರ್ಯಾಲಯಕ್ಕೆ ಸಂಪರ್ಕಿಸಿಲ್ಲವೇಕೆ? ನಮ್ಮ ಗಮನಕ್ಕೆ ತಂದಿಲ್ಲವೇಕೆ? ಪತ್ರವ್ಯವಹಾರ ಮಾಡಿಲ್ಲವೇಕೆ? ಎಂಬುದರ ಬಗ್ಗೆ ಏಳು ದಿನಗಳಲ್ಲಿ ಸ್ಪಷ್ಟ ಲಿಖಿತ ವಿವರಣೆ ನೀಡಲು ತಿಳಿಸಿದ್ದು ಇಲ್ಲವಾದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿಭಟನಾಕಾರರಾದ ಹರೀಶ ನಾಟೀಕಾರ, ಪ್ರಕಾಶ ಚಲವಾದಿ, ಆನಂದ ಮುದೂರ, ಬಸವರಾಜ ಚಲವಾದಿ, ಸಿದ್ದು ಚಲವಾದಿ, ರೇವಣಸಿದ್ದಪ್ಪ ನಾಯಕ ಇದ್ದರು.