ಮುದ್ದೇಬಿಹಾಳ : ರಸ್ತೆಯನ್ನು ದಾಟುತ್ತಿದ್ದವರ ಮೇಲೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು ಮತ್ತೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಕುಂಟೋಜಿ ಗ್ರಾಮದ ಹೊರ ವಲಯದ ಪಿಕೆಪಿಎಸ್ ಬಳಿ ಗುರುವಾರ ರಾತ್ರಿ 11.10 ಸುಮಾರಿಗೆ ನಡೆದಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ:
ಮೃತಪಟ್ಟವರನ್ನು ದೇವರಹಿಪ್ಪರಗಿ ತಾಲ್ಲೂಕು ಹಂಚಲಿಯ ಅನೀಲ ಎಂ.ಖೈನೂರ(23), ತಾಳಿಕೋಟಿ ತಾಲ್ಲೂಕಿನ ಗೊಟಗುಣಕಿಯ ನಿಂಗರಾಜ ಚೌಡಕಿ(22), ಮುದ್ದೇಬಿಹಾಳ ತಾಲ್ಲೂಕಿನ ಮಲಗಲದಿನ್ನಿಯ ಕುಮಾರ ಪ್ಯಾಟಿ(18) ಹಾಗೂ ಬಾಗಲಕೋಟ ಜಿಲ್ಲಾಸ್ಪತ್ರೆಯಲ್ಲಿ ಮಲಗಲದಿನ್ನಿಯ ರಾಯಪ್ಪ ಮಹಾಂತಪ್ಪ ಬಾಗೇವಾಡಿ(24) ಸಾವನ್ನಪ್ಪಿದವರು.
ಮಲಗಲದಿನ್ನಿಯ ಶಾಹಿದ ಹುನಗುಂದ(19), ಪ್ರಶಾಂತ ಎಚ್ ಕುರುಬಗೌಡರ(16), ಹನಮಂತ ಕುರುಬಗೌಡರ( 1 8) ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಬಾಗಲಕೋಟ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಕುಂಟೋಜಿ ಜಾತ್ರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಬಂದಿದ್ದವರು ರಸ್ತೆ ಬದಿ ವಾಹನ ನಿಲ್ಲಿಸಿ ಮೂತ್ರವಿಸರ್ಜನೆಗೆ ರಸ್ತೆ ದಾಟುವ ಸಮಯದಲ್ಲಿ ಅತಿ ವೇಗದಿಂದ ಬಂದ ಬೈಕ್ ಸವಾರರು ಡಿಕ್ಕಿ ಹೊಡೆದಿದ್ದರಿಂದಲೇ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳಿಗೆ ರಾತ್ರಿಯೇ ತಾಲ್ಲೂಕು ಆಸ್ಪತ್ರೆಯ ವೈದ್ಯ ಡಾ.ಪರಶುರಾಮ ವಡ್ಡರ ನೇತೃತ್ವದಲ್ಲಿ ಶುಶ್ರೂಷಣಾಧಿಕಾರಿಗಳಾದ ಶೇಖಪ್ಪ ಬಿರಾದಾರ,ಅಖೀಲಾ ಬೇಗಂ, ರುಕ್ಸಾನಾ,ದಾನಮ್ಮ ಪ್ರಾಥಮಿಕ ಚಿಕಿತ್ಸೆ ನೀಡಿದರು.
ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸೈ ಸಂಜಯ ತಿಪರೆಡ್ಡಿ ಭೇಟಿ ನೀಡಿದ್ದಾರೆ.
ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.