
ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದಲ್ಲಿ ಬುಧವಾರ ಸಂಜೆ ಬೀಸಿದ ಭಾರಿ ಬಿರುಗಾಳಿ, ಅಕಾಲಿಕ ಆಲಿಕಲ್ಲು ಮಳೆಗೆ ಪಪ್ಪಾಯಿ,ದ್ರಾಕ್ಷಿ ಬೆಳೆ ನಾಶವಾಗಿದೆ.

ಗ್ರಾಮದ ರೈತ ಕೆ. ವಾಯ್. ಬಿರಾದಾರ ಅವರ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಅಂದಾಜು ನಾಲ್ಕು ಸಾವಿರ ಪಪ್ಪಾಯಿ ಗಿಡಗಳು ನೆಲಕ್ಕುರುಳಿವೆ. ಎರಡು ತಿಂಗಳು ಕಳೆದಿದ್ದರೆ ಪಪ್ಪಾಯಿ ಫಸಲು ಕೈಗೆ ಬರುತ್ತಿತ್ತು. ಪಪ್ಪಾಯಿ ಬೆಳೆಗಾಗಿ ಮೂರು ಲಕ್ಷ ರೂ. ಖರ್ಚು ಮಾಡಿದ್ದು ಕೈಗೆ ಬಂದಿದ್ದು ಬಾಯಿಗೆ ಬಾರದಂತಾಗಿದೆ ಎಂದು ರೈತ ಕೆ. ವಾಯ್. ಬಿರಾದಾರ ಅಲವತ್ತುಕೊಂಡಿದ್ದಾರೆ.
ಗ್ರಾಮದ ಶಿವಾನಂದ ಬಿರಾದಾರ ಅವರು ಆರು ಎಕರೆ ಪ್ರದೇಶದಲ್ಲಿ ಹಾಕಿದ್ದ ದ್ರಾಕ್ಷಿ ತೋಟಕ್ಕೂ ಹಾನಿಯಾಗಿದ್ದು ಬೆಳೆ ನೆಲಕ್ಕುರುಳಿ ನಷ್ಟವುಂಟಾಗಿದೆ. ಸಂಕಷ್ಟದ ಕಾಲದಲ್ಲಿ ದ್ರಾಕ್ಷಿ, ಪಪ್ಪಾಯಿ ಕೈ ಹಿಡಿಯಬಹುದೆಂಬ ಲೆಕ್ಕಾಚಾರ ಮಾಡಿಕೊಂಡಿದ್ದ ರೈತರಿಗೆ ಭಾರೀ ನಷ್ಟವುಂಟಾಗಿದೆ.
ಢವಳಗಿ ಹೋಬಳಿಯ ಬಸರಕೋಡ, ರೂಢಗಿ, ಅಗಸಬಾಳ ಭಾಗದಲ್ಲಿ ಬುಧವಾರ ಸಂಜೆ ಬೀಸಿದ ಬಿರುಗಾಳಿಗೆ ಹಲವು ಮರಗಳು ಉರುಳಿ ಬಿದ್ದಿದ್ದು ವಿದ್ಯುತ್ ವ್ಯತ್ಯಯವಾಗಿತ್ತು. ಹೊಲದಲ್ಲಿದ್ದ ತೋಟಗಾರಿಕೆ ಬೆಳೆಯೂ ನೆಲಕ್ಕಚ್ಚಿದೆ.
ಪರಿಹಾರಕ್ಕೆ ಆಗ್ರಹ: ಬಸರಕೋಡದಲ್ಲಿ ಭಾರೀ ಬಿರುಗಾಳಿ, ಮಳೆಗೆ ದ್ರಾಕ್ಷಿ, ಪಪ್ಪಾಯಿ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಹಾನಿ ಆಗಿದ್ದು ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಧ್ಯೆಪ್ರವೇಶಿಸಿ ನಷ್ಟಕ್ಕೊಳಗಾದ ರೈತರಿಗೆ ಸಮೀಕ್ಷೆ ನಡೆಸಿ ಪರಿಹಾರ ದೊರಕಿಸಿಕೊಡಬೇಕು ಎಂದು ರೈತ ಮುಖಂಡ ಗುರುನಾಥಗೌಡ ಬಿರಾದಾರ ಒತ್ತಾಯಿಸಿದ್ದಾರೆ.