ಮುದ್ದೇಬಿಹಾಳ : ಪಟ್ಟಣದ ಏಪಿಎಂಸಿಯ ಜಾಗೆಯ ಕುರಿತು ಕಲಬುರ್ಗಿ ಉಚ್ಛ ನ್ಯಾಯಾಲಯ ಸರ್ವೆ ನಂ.98ಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದಗಳ ಕುರಿತು ತೀರ್ಮಾನ ಕೈಗೊಳ್ಳಲು ಸದರಿ ಜಾಗೆಯನ್ನು ಮೋಜಣಿ ಕಾರ್ಯ ಕೈಗೊಂಡು ಪಿಟಿ ಶೀಟ ತಯಾರಿಸುವಂತೆ ಆದೇಶ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಬುಧವಾರ ಇಲ್ಲಿನ ವಿವಾದಿತ ಜಾಗೆಯನ್ನು ಉಪ ವಿಭಾಗಾಧಿಕಾರಿ ಗುರುನಾಥ ದಡ್ಡಿ ಪರಿಶೀಲನೆ ನಡೆಸಿದರು.
ಎಪಿಎಂಸಿಗೆ ಕೊಟ್ಟಿರುವ ಜಾಗೆ, ರಸ್ತೆಗಳು, ಅತಿಕ್ರಮಣಗೊಂಡಿರುವ ಜಾಗೆಯನ್ನು ವೀಕ್ಷಿಸಿದರು. ಅರ್ಜಿದಾರ ಲಕ್ಷ್ಮಣ ವಾಲಿಕಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಪಿಎಂಸಿಗೆ ರಿ.ಸ.ನಂ 98ರಲ್ಲಿ 21 ಎಕರೆ 30 ಗುಂಟೆ ಜಮೀನಿದ್ದು ಸದರಿ ಜಮೀನನ್ನು ನಮ್ಮ ಅಜ್ಜನವರು 10 ಎಕರೆ 28 ಗುಂಟೆ ಕ್ರಯಕ್ಕೆ ನೀಡಿದ್ದು 9 ಎಕರೆ 39 ಗುಂಟೆ ಏಪಿಎಂಸಿಗೆ ಭೂಸ್ವಾಧೀನವಾಗಿರುತ್ತದೆ. ಉಳಿದ 1 ಎಕರೆ 3 ಗುಂಟೆ ಜಮೀನನ್ನು ಅಳತೆ ಮಾಡಿ ಪಿಟಿ ಶೀಟ್ ತಯಾರಿಸಿ ಕೊಡುವಂತೆ ಹೈಕೋರ್ಟ್ ಆದೇಶ ಮಾಡಿ ನಾಲ್ಕು ತಿಂಗಳು ಗತಿಸಿದರೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು ಹೈಕೋರ್ಟ್ ಆದೇಶವನ್ನು ಪಾಲಿಸದೇ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು.
ಅರ್ಜಿದಾರ ಲಕ್ಷ್ಮಣ ವಾಲಿಕಾರ, ಉಪ ವಿಭಾಗಾಧಿಕಾರಿಗಳೊಂದಿಗೆ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ತಹಸೀಲ್ದಾರ್‌ರು ಸಮರ್ಪಕ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ಅರ್ಜಿದಾರರು ವಾಗ್ವಾದ ನಡೆಸಿದರು. ಅಲ್ಲದೇ ಅಕ್ರಮವಾಗಿ ಕೆಲವರ ಪ್ರಭಾವಕ್ಕೆ ಅಧಿಕಾರಿಗಳು ಒಳಗಾಗಿ ಹೈಕೋರ್ಟ್ ಆದೇಶವನ್ನು ಗಂಭೀರವಾಗಿ ಪರಿಗಣಿಸದೇ ಮೋಜಣಿ ಕಾರ್ಯ ವಿಳಂಬ ಮಾಡುವುದರೊಂದಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡಿ, ಸದರಿ ಜಮೀನಿನ ವಿವಾದದ ಕುರಿತು ದಾಖಲೆಗಳನ್ನು ಪರಿಶೀಲನೆ ನಡೆಸಿ ಮೇಲಧಿಕಾರಿಗಳ ಅನುಮತಿ ಪಡೆದುಕೊಂಡು ಮರು ಸರ್ವೆಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಭೂದಾಖಲೆಗಳ ಸಹಾಯಕ ನಿರ್ದೇಶಕ ಎಸ್. ಎಸ್. ಸಜ್ಜನ, ನಗರ ಮಾಪನ ಅಧಿಕಾರಿ ಶೈಲಶ್ರೀ ಹಿರೇಮಠ, ಕಂದಾಯ ನಿರೀಕ್ಷಕ ಪವನ ತಳವಾರ ಇದ್ದರು.