
ಮುದ್ದೇಬಿಹಾಳ : ಪಟ್ಟಣದ ಪುರಸಭೆಯಲ್ಲಿ ಅನಧಿಕೃತವಾಗಿ ನೇಮಕಗೊಂಡಿರುವ ಮತ್ತು ಉಚ್ಛನ್ಯಾಯಾಲಯದ ಆದೇಶ ತಿರುಚಿ ನ್ಯಾಯಾಂಗ ನಿಂದನೆ ಮಾಡಿರುವ ಆರೋಪಗಳ ಕುರಿತಂತೆ ತ್ವರಿತವಾಗಿ ವರದಿ ಸಲ್ಲಿಸುವಂತೆ ಮುದ್ದೇಬಿಹಾಳ ಪುರಸಭೆ ಮುಖ್ಯಾಧಿಕಾರಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಸೂಚಿಸಿದ್ದಾರೆ ಎಂದು ಪುರಸಭೆ ಸದಸ್ಯ ಶಿವು ಶಿವಪೂರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪುರಸಭೆಯಲ್ಲಿ ನೇಮಕವಾಗಿರುವ ಸಿಬ್ಬಂದಿ ಶಮಶುದ್ದೀನ ಮೂಲಿಮನಿ ಅವರ ನೇಮಕಾತಿ ಅಕ್ರಮವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೇಮಕಾತಿ ಮಾಡಿಕೊಳ್ಳುವುದಕ್ಕೆ ಬರುವುದಿಲ್ಲ ಎಂಬ ಸ್ಪಷ್ಟ ಅಭಿಪ್ರಾಯ ಕೊಟ್ಟಿದ್ದರೂ ಅದನ್ನು ಉಲ್ಲಂಘಿಸಿ ಪುರಸಭೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೂಲಿಮನಿ ಅವರ ಮೇಲೆ ಕ್ರಮಕ್ಕೆ ಆಗ್ರಹಿಸಿ ವಿಜಯಪುರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಮಾ.25, ಮಾ.29 ಹಾಗೂ ಏ.8 ರಂದು ಪತ್ರ ನೀಡಿದ್ದೇನೆ. ಈವರೆಗೂ ಅವರ ಮೇಲೆ ಕ್ರಮ ಕೈಗೊಳ್ಳದೇ ಮೇಲಧಿಕಾರಿಗಳು ಮೌನವಾಗಿದ್ದಾರೆ ಎಂದು ದೂರಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಮುದ್ದೇಬಿಹಾಳ ಪುರಸಭೆ ಮುಖ್ಯಾಧಿಕಾರಿ ಸದರಿ ವಿಷಯದ ಕುರಿತು ಕೂಲಂಕುಶವಾಗಿ ಪರಿಶೀಲಿಸಿ ವಿಳಂಬಕ್ಕೆ ಆಸ್ಪದ ನೀಡದೇ ನಿಯಮಾನುಸಾರ ಎರಡು ದಿನಗಳ ಒಳಗಾಗಿ ಅಗತ್ಯ ಕ್ರಮ ವಹಿಸಿ ತಮ್ಮ ಸ್ಪಷ್ಟವಾದ ಅಭಿಪ್ರಾಯ, ನಿಯಮಗಳೊಂದಿಗೆ ಹಾಗೂ ಸೂಕ್ತ ದಾಖಲಾತಿಗಳೊಂದಿಗೆ ಈ ಕಾರ್ಯಾಲಯಕ್ಕೆ ವರದಿ ಸಲ್ಲಿಸಬೇಕು. ತಪ್ಪಿದ್ದಲ್ಲಿ ಮುಂದಿನ ಆಗು ಹೋಗುಗಳಿಗೆ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಯೋಜನಾ ನಿರ್ದೇಶಕ ಬದ್ರುದ್ದೀನ ಸೌದಾಗರ ತಿಳಿಸಿದ್ದಾರೆ ಎಂದು ದೂರುದಾರ ಸದಸ್ಯ ಶಿವಪೂರ ತಿಳಿಸಿದ್ದಾರೆ.