
ಮುದ್ದೇಬಿಹಾಳ : ಬಸನಗೌಡ ಪಾಟೀಲ ಯತ್ನಾಳರು ಯಾವ ಪಕ್ಷದಲ್ಲಿರುತ್ತಾರೆಯೋ ಸಾಯುವವರಿಗೂ ಅವರ ಜೊತೆಗೆ ಇದ್ದು ಕೆಲಸ ಮಾಡುತ್ತೇವೆ. ಅವರಿಗಾಗಿ ಜೈಲಿಗೆ ಹೋಗುವುದಕ್ಕೂ ಸಿದ್ಧ, ಪ್ರಾಣ ಕೊಡಲು ತಯಾರಿದ್ದೇವೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.

ಪಟ್ಟಣದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ಕ್ರಮವನ್ನು ಖಂಡಿಸಿ ಸೋಮವಾರ ಬಸವೇಶ್ವರ ವೃತ್ತದಲ್ಲಿ ಪಂಚಮಸಾಲಿ ಸಮಾಜ, ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಯತ್ನಾಳರ ಅಭಿಮಾನಿಗಳು ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಅವರು ಮಾತನಾಡಿದರು.
ಯಾವ ಸಮಾಜ ನಿಮಗೆ ಸಪೋರ್ಟ ಮಾಡಿದ್ದರೋ ಅವರ ದ್ರಾಕ್ಷಿ ತೋಟ ಬಂದ ಮಾಡಿ ಸಂಸ್ಕಾರ ಇಲ್ಲದವರಂತೆ ನಡೆದುಕೊಂಡವರು ನೀವು. ಬಸನಗೌಡರ ಬಗ್ಗೆ ಹಗುರವಾಗಿ ಮಾತನಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ. ದೇಶಮುಖರು, ನಾಡಗೌಡರು ಇಷ್ಟು ವರ್ಷ ಎಂಎಲ್‌ಎ ಆದರೂ ಮಿಣಜಗಿ ಕಲ್ಲಿನ ಕ್ವಾರಿ ಬಂದ್ ಆಗಿರಲಿಲ್ಲ. ಆದರೆ ಹಿಂದಿನ ಶಾಸಕರು ಅಧಿಕಾರದಲ್ಲಿದ್ದಾಗ ಕ್ವಾರಿ ಬಂದ್ ಮಾಡಿಸಿದರು. ಬಸನಗೌಡರ ಬಗ್ಗೆ ನೀವು ಮಾತನಾಡಿದರೆ ನಾವು ಅದೇ ಧಾಟಿಯಲ್ಲಿ ನಿನಗೆ ಉತ್ತರ ಕೊಡುತ್ತೇವೆ. ಯತ್ನಾಳ ಅವರು ನಮಗೆ ತಾಯಿ ಇದ್ದಂತೆ ಅವರಿಗೆ ಅಪಮಾನವಾದರೆ ನಾವು ಸಹಿಸುವುದಿಲ್ಲ ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ಯುವ ಬ್ರಿಗೇಡ್ ಸಂಚಾಲಕ ರಾಘವ ಅಣ್ಣಿಗೇರಿ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿ ಉಳಿಯಬೇಕಾದರೆ ಯತ್ನಾಳ ಪಕ್ಷದಲ್ಲಿರಬೇಕು. ಕುಟುಂಬ ರಾಜಕಾರಣಕ್ಕೆ ಬಿಜೆಪಿಯಲ್ಲಿ ಅವಕಾಶವಿಲ್ಲ ಎಂದು ಭಾಷಣ ಮಾಡುವ ಬಿಜೆಪಿ ವರಿಷ್ಠರು ಅಪ್ಪ ಮಕ್ಕಳ ಮಾತು ಕೇಳಿ ಯತ್ನಾಳರನ್ನು ಪಕ್ಷದಿಂದ ಹೊರಗಡೆ ಹಾಕಿದ್ದೀರಿ. ಬ್ರಷ್ಟಾಚಾರಿ, ಅಡ್ಜಸ್ಟ್ಮೆಂಟ್ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು. ಇಲ್ಲದಿದ್ದಲ್ಲಿ ಬಿಜೆಪಿ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.
ಮುಖಂಡ ಅರವಿಂದ ಕೊಪ್ಪ ಮಾತನಾಡಿ, ಯತ್ನಾಳರ ಪರ ಹೋರಾಟಕ್ಕೆ ಅಭಿಮಾನಿಗಳು ಸ್ವಯಂಪ್ರೇರಿತಾಗಿ ಬಂದಿದ್ದಾರೆ. ನಿಮ್ಮ ಹಾಗೆ ಜನರನ್ನು ಕೂಡಿಸಲು ಹಣ, ಸೀರೆ ಕೊಟ್ಟು ಕರೆತರುವುದಿಲ್ಲ. ಕೀಳುಮಟ್ಟದ ವಿಷಯಗಳನ್ನು ಹೇಳುವುದನ್ನು ಕೈಬಿಡಿ ಎಂದರು.
ಮುಖಂಡರಾದ ಬಸನಗೌಡ ಪಾಟೀಲ (ನಾಗರಾಳ ಹುಲಿ), ಎಂ. ಎಸ್. ರುದ್ರಗೌಡರ, ಪಂಚಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಅಮರೇಶ ಗೂಳಿ, ಕಿತ್ತೂರು ಚೆನ್ನಮ್ಮ ಯುವ ಘಟಕದ ತಾಲ್ಲೂಕು ಅಧ್ಯಕ್ಷ ರವಿ ಕಮತ, ಬಸರಕೋಡದ ಸೂಳಿಭಾವಿ, ಬಸವರಾಜ ಗೋನಾಳ, ಕಾಮರಾಜ ಬಿರಾದಾರ ಮೊದಲಾದವರು ಇದ್ದರು.
ಮುದ್ದೇಬಿಹಾಳ ಪಟ್ಟಣದ ಬನಶಂಕರಿ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಹಾಯ್ದು ಬಸವೇಶ್ವರ ವೃತ್ತ, ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಕಿತ್ತೂರು ಚೆನ್ನಮ್ಮನವರ ವೃತ್ತದಲ್ಲಿ ಸಮಾಪ್ತಿಗೊಳಿಸಲಾಯಿತು.
ಹೋರಾಟದಲ್ಲಿ ತಾಲ್ಲೂಕು ಪಂಚಮಸಾಲಿ ಸಮಾಜ, ಯತ್ನಾಳರ ಅಭಿಮಾನಿಗಳು, ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯ ಸಮಾಪ್ತಿ ಗೊಳಿಸಲಾಯಿತು. ವಿರೋಧದ ಮಧ್ಯೆಯೂ ಯಡಿಯೂರಪ್ಪ, ವಿಜಯೇಂದ್ರ, ನಡಹಳ್ಳಿ ಅವರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಒಂದು ಗಂಟೆ ರಸ್ತೆ ತಡೆ : ಬಸವೇಶ್ವರ ವೃತ್ತಕ್ಕೆ ಆಗಮಿಸಿದಾಗ ಹೋರಾಟಗಾರರು ನಾಲ್ಕು ದಿಕ್ಕಿನಿಂದ ರಸ್ತೆಗಳನ್ನು ಬಂದ್ ಮಾಡಿದ್ದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯುಂಟಾಯಿತು. ಸಿಪಿಐ ಸಿಪಿಒಐ ಮೊಹ್ಮದ ಫಸಿವುದೀನ, ಪಿಎಸ್‌ಐ ಸಂಜಯ ತಿಪರಡ್ಡಿ ಬಿಗಿ ಭದ್ರತೆ ಒದಗಿಸಿದ್ದರು.