ಮುದ್ದೇಬಿಹಾಳ : ಸಾರ್ವಜನಿಕವಾಗಿ ಮಾಹಿತಿ ಕೇಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಹೋದರೆ ಅಲ್ಲಿರುವ ಅಧಿಕಾರಿ ಶಿವಮೂರ್ತಿ ಕುಂಬಾರ ಮಹಿಳೆಯರೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದು ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿ ಗುರುವಾರ ಪಟ್ಟಣದಲ್ಲಿ ಉತ್ತರ ಕರ್ನಾಟಕ ರೈತ ಹಾಗೂ ಕಬ್ಬು ಬೆಳೆಗಾರರ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಆರಂಭಗೊAಡ ಪ್ರತಿಭಟನೆ ಪ್ರಮುಖ ಬೀದಿಗಳಲ್ಲಿ ಹಾಯ್ದು ತಹಶೀಲ್ದಾರ್ ಕಚೇರಿಗೆ ಆಗಮಿಸಿತು.ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರ್ತಿ ಮುನ್ನಿ ಮುಲ್ಲಾ, ಉತ್ತರ ಕರ್ನಾಟಕ ರೈತ ಹಾಗೂ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷೆ ರಜಿಯಾ ನದಾಫ , ಅವರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಗರ್ಭಿಣಿಯರಿಗೆ, ಬಾಣಂತಿಯರಿಗೆ ಮಕ್ಕಳಿಗೆ ಕೊಡುವ ಸೌಲಭ್ಯಗಳ ಮಾಹಿತಿ ಕೇಳಲು ಹೋದರೆ ಕಚೇರಿಯಿಂದ ಹೊರಗೆ ಹಾಕುವಂತೆ ತಮ್ಮ ಕೆಲಸಗಾರರಿಗೆ ಹೇಳುತ್ತಾರೆ. ಅಂಗನವಾಡಿಗಳಲ್ಲಿ ಮಕ್ಕಳಿಗೆ ಸರಿಯಾಗಿ ಮೊಟ್ಟೆ ಕೊಡುತ್ತಿಲ್ಲ ಎಂದು ವಿಚಾರಿಸಲು ಹೋದರೆ ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೇ ನಮ್ಮ ಇಲಾಖೆಯಲ್ಲಿ ನಾನು ಮಾಡಿದ್ದೇ ಕಾನೂನು ಎಂದು ಸರ್ವಾಧಿಕಾರದಿಂದ ಮಾತನಾಡುತ್ತಾರೆ.ಇಂತಹ ಅಧಿಕಾರಿಯನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಮಹಿಳಾ ಪತ್ರಕರ್ತೆಯೊಂದಿಗೂ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ದೂರಿದರು.
ತಹಶೀಲ್ದಾರ್ ಬಲರಾಮ ಕಟ್ಟಿಮನಿ ಮನವಿ ಪತ್ರ ಸ್ವೀಕರಿಸಿದರು.ವಾಲ್ಮೀಕಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಭೀಮಬಾಯಿ ಹತ್ತೂರ, ದಲಿತ ಮುಖಂಡ ಸಂಗಪ್ಪ ಚಲವಾದಿ,ರೇಣುಕಾ ಚಲವಾದಿ, ಸುಮಿತ್ರಾ ತಳವಾರ,ಶಾಮಲಾ ಚಲವಾದಿ,ಸುಧಾ ಮುರಾಳ,ಕಮಲವ್ವ ತಳವಾರ,ರೇಣುಕಾ ಕುಂಟೋಜಿ,ಬಸವ್ವ ಮಾದರ,ಅರುಣ ದಾಸರ,ಕೃಷ್ಣ ದಾಸರ, ಪ್ರಕಾಶ ಛಲವಾದಿ ಮೊದಲಾದವರು ಇದ್ದರು.