ಮುದ್ದೇಬಿಹಾಳ : ದಲಿತ ಜನಾಂಗದವರಿಗೆ ಜಾತಿ ನಿಂದನೆ ಮಾಡಿದ ಆಪಾದನೆ ಎದರಿಸುತ್ತಿರುವ ಬಿಜೆಪಿಯ ಮುನಿರತ್ನ ನಾಯ್ಡು ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂಬುದು ಸೇರಿದಂತೆ 10 ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ತಮಟೆ ಬಾರಿಸುತ್ತಾ ದಲಿತ ಜನಾಂಗದವರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಘೋಷಣೆಗಳನ್ನು ಕೂಗುತ್ತಾ ತಹಶೀಲ್ದಾರ್ ಕಚೇರಿಗೆ ಆಗಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡರಾದ ತಿಪ್ಪಣ್ಣ ದೊಡಮನಿ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ದಲಿತರ ಜಾತಿ ನಿಂದನೆ ಮಾಡಿದ್ದು ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಡಿ.ಬಿ.ಮುದೂರ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ತಾರತಮ್ಯ ಎಸಗದೇ ಸರ್ಕಾರದ ಸೌಲಭ್ಯಗಳು ಎಲ್ಲ ದಲಿತ ಜನಾಂಗದವರಿಗೆ ಸರಿಯಾಗಿ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.
ಮುಖಂಡ ಹರೀಶ ನಾಟೀಕಾರ, ಪ್ರಕಾಶ ಚಲವಾದಿ(ಸರೂರ) ಮಾತನಾಡಿ, ಬ.ಬಾಗೇವಾಡಿ ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ಅವರು ದಲಿತ ಜನಾಂಗದವರ ಮೇಲೆ ವಿವಿಧ ರೀತಿಯ ದೌರ್ಜನ್ಯದ 21 ಪ್ರಕರಣಗಳು ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ.
ಮುದ್ದೇಬಿಹಾಳ ಪೊಲೀಸ್ ಠಾಣೆಯ ಸಿಪಿಐ, ಪಿಎಸ್‌ಐ,ಡಿವೈಎಸ್ಪಿ ಅವರಿಗೆ ಲಂಚದ ರೂಪದಲ್ಲಿ ಹಣವನ್ನು ಪೋನಪೇ ಮೂಲಕ ಮಾಡಿಸಿಕೊಂಡಿದ್ದು ಅದನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಇನ್ನುಳಿದಂತೆ ತಾಳಿಕೋಟಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯ ಸಾವಿಗೆ ಕಾರಣರಾಗಿರುವವರ ಮೇಲೆ ಕ್ರಮ ಜರುಗಿಸಬೇಕು.ಗಂಗಾವತಿ ತಾಲ್ಲೂಕು ಸಂಕನಾಳ, ಬಾದಾಮಿ, ಹುಣಸಗಿ ತಾಲ್ಲೂಕು ಬಪ್ಪರಗಿಯಲ್ಲಿ ದಲಿತ ಜನಾಂಗದವರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಮುಖಂಡ ಚೆನ್ನಪ್ಪ ವಿಜಯಕರ್,ಸಿದ್ದು ಕಟ್ಟಿಮನಿ, ದೇವರಾಜ ಹಂಗರಗಿ ಮಾತನಾಡಿದರು.
ಗ್ರೇಡ್-2 ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ದೌರ್ಜನ್ಯ ತಡೆ ಸಮಿತಿ ಸದಸ್ಯ ಮಲ್ಲು ತಳವಾರ, ಮುಖಂಡರಾದ ಪರಶುರಾಮ ನಾಲತವಾಡ, ಪ್ರಶಾಂತ ಕಾಳೆ, ಪರಶುರಾಮ ಮುರಾಳ, ಬಸವರಾಜ ಸರೂರ, ಭಗವಂತ ಕಬಾಡೆ,ಬಲಭೀಮ ನಾಯ್ಕಮಕ್ಕಳ, ಮಹೆಬೂಬ ಕುಂಟೋಜಿ, ರಾಮಣ್ಣ ರಾಜನಾಳ, ಮುತ್ತು ಚಲವಾದಿ, ಪ್ರಚಂಡಪ್ಪ ಚಲವಾದಿ, ಆನಂದ ಮುದೂರು, ಪುರಸಭೆ ಸದಸ್ಯ ಶಿವು ಶಿವಪೂರ, ಮಂಜುನಾಥ ಕಟ್ಟಿಮನಿ ಪಾಲ್ಗೊಂಡಿದ್ದರು.