
ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೇಮಕಗೊಂಡಿರುವ ಮೂವರು ವಾಟರ್‌ಮನ್‌ಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರದಿಂದ ಮಾದಿಗ ಜನಸಂಘದ ಪದಾಧಿಕಾರಿಗಳು ಧರಣಿ ಸತ್ಯಾಗ್ರಹ ಆರಂಭಿಸಿದರು.

ಹೋರಾಟದ ನೇತೃತ್ವ ವಹಿಸಿದ ಜಿಲ್ಲಾ ದೌರ್ಜನ್ಯ ತಡೆ ಸಮಿತಿ ಮಾಜಿ ಸದಸ್ಯ ಬಸವರಾಜ ಪೂಜಾರಿ, ಗ್ರಾಮ ಪಂಚಾಯಿತಿ ಪಿಡಿಒ, ಅಧ್ಯಕ್ಷರು ಸೇರಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿಯಮಬಾಹಿರವಾಗಿ ಕೆಲಸದಲ್ಲಿ ಮುಂದುವರೆದಿರುವ ಮೂವರು ವಾಟರ್‌ಮನ್‌ಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಮಾಡಿದ್ದರೂ ಅದಕ್ಕೆ ಬೆಲೆ ಕೊಡದೇ ಅವರನ್ನು ಹಾಗೆ ಮುಂದುವರೆಸಿದ್ದಾರೆ. ಅಕ್ರಮವಾಗಿ ನೇಮಕಗೊಂಡಿರುವ ವಾಟರ್‌ಮನ್‌ಗಳಿಂದ ಪಿಡಿಒ, ಅಧ್ಯಕ್ಷರು ಲಂಚ ಪಡೆದುಕೊಂಡಿದ್ದಾರೆಯೇ ಎಂಬ ಅನುಮಾನ ಸೃಷ್ಟಿಯಾಗಿದೆ. ಮೇಲಧಿಕಾರಿಯಾಗಿರುವ ತಾಪಂ ಇಒ ಅವರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು ಹಾರಿಕೆ ಉತ್ತರಗಳನ್ನು ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರಕ್ಕೆ ವಂಚಿಸುತ್ತಿರುವ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನಧಿಕೃತವಾಗಿ ಸರ್ಕಾರದ ವೇತನವನ್ನೂ ಪಡೆದಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಪಂಚಾಯಿತಿ ಅಧ್ಯಕ್ಷ, ಪಿಡಿಒ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ತಾಪಂ ಇಒ ನಿಂಗಪ್ಪ ಮಸಳಿ ಹೋರಾಟಗಾರರ ಮನವೊಲಿಸಲು ಯತ್ನಿಸಿದರೂ ವಾಟರ್‌ಮನ್‌ಗಳ ವಜಾಗೊಳಿಸಿದ ಬಳಿಕವೇ ನಮ್ಮ ಹೋರಾಟ ಹಿಂದಕ್ಕೆ ಪಡೆದುಕೊಳ್ಳುವುದಾಗಿ ತಿಳಿಸಿದ್ದರಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅಧಿಕಾರಿ ವಾಪಸ್ ಮರಳಿದರು.
ಮಾದಿಗ ಸಮಾಜದ ಮುಖಂಡರಾದ ರಮೇಶ ದೊಡ್ಡಮನಿ, ಶಿವಪುತ್ರಪ್ಪ ಪೂಜಾರಿ, ದುರಗಪ್ಪ ಮಾದರ, ಹಣಮಂತ ಅಬ್ಬಿಹಾಳ, ರಾಮಪ್ಪ ಕವಡಿಮಟ್ಟಿ,ಕುಂಟಪ್ಪ ಜೋಗಿನ , ಪರಶುರಾಮ ಫಿರಂಗಿ, ಮುದಕಪ್ಪ ಫಿರಂಗಿ, ಹಣಮಂತ ಕವಡಿಮಟ್ಟಿ ಮೊದಲಾದವರು ಇದ್ದರು.