ಯಾದಗಿರಿ: ನಗರ ಪೊಲೀಸ್ ಠಾಣೆಯ ಪಿಎಸ್ಐ ಪರಶುರಾಮ ಅವರ ಸಾವಿನ ಕುರಿತು ಸೂಕ್ತ ತನಿಖೆಯಾಗಬೇಕು. ಇದರಲ್ಲಿ ಪ್ರಭಾವಿಗಳ ಹೆಸರು ಕೇಳಿ ಬರುತ್ತಿದ್ದು, ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಪತ್ರ ಬರೆದಿದ್ದಾರೆ.
ಪಿಎಸ್ಐ ಪರಶುರಾಮ ಅವರ ಪತ್ನಿ ಶ್ವೇತಾ ಅವರು ಏಳು ತಿಂಗಳ ಗರ್ಭಿಣಿ. ಅವರ ಕುಟುಂಬ ನಿರ್ವಹಣೆಗೆ ನನ್ನ ಎರಡು ತಿಂಗಳ ಶಾಸಕ ಸಂಬಳ ನೀಡುತ್ತೇನೆ ಹಾಗೂ ರಾಜ್ಯ ಸರ್ಕಾರವು ಸಹ ಮೃತ ಪಿಎಸ್ಐ ಕುಟುಂಬಕ್ಕೆ ನ್ಯಾಯ ಒದಗಿಸಿ ಆರ್ಥಿಕ ನೆರವು ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ನಗರ ಪೊಲೀಸ್ ಠಾಣೆಗೆ ಬಂದು ಇನ್ನು ಒಂದು ವರ್ಷವೂ ಪೂರ್ಣಗೊಂಡಿರಲಿಲ್ಲ. ಆಗಲೇ ಪಿಎಸ್ಐ ಪರಶುರಾಮ ಅವರಿಗೆ ವರ್ಗಾವಣೆಯಾಗಿದ್ದು ಅವೈಜ್ಞಾನಿಕ. ವರ್ಗಾವಣೆ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಗೃಹ ಇಲಾಖೆ ಹಾಗೂ ಇಲಾಖೆ ಮೇಲಾಧಿಕಾರಿಗಳು ಪಿಎಸ್ಐ ಪರಶುರಾಮ ಅವರ ಸಾವಿಗೆ ಹಾಗೂ ಅವರ ಪತ್ನಿ ಶ್ವೇತಾ ಅವರಿಗೆ ನ್ಯಾಯ ಒದಗಿಸಬೇಕು ಎಂದು ಶಾಸಕ ಕಂದಕೂರು ಪತ್ರದಲ್ಲಿ ಆಗ್ರಹಿಸಿದ್ದಾರೆ.