ಮುದ್ದೇಬಿಹಾಳ : ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಉದ್ಯಾನವನಗಳಲ್ಲಿ ಅಮೃತ 2.0 ಯೋಜನೆ ಅಡಿ ಅಮೃತಮಿತ್ರ ಹೆಸರಿನಲ್ಲಿ ಎಂಟು ಸಾರ್ವಜನಿಕ ಉದ್ಯಾನವನಗಳ ನಿರ್ವಹಣೆಗೆ ಟೆಂಡರ್ ಕರೆಯಲಾಗುವುದು ಎಂದು ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ಇಲಾಖೆ, ಹಸಿರು ತೋರಣ ಗೆಳೆಯರ ಬಳಗದ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಯೋಜನೆಯಡಿ ತಲಾ ಹತ್ತು ಲಕ್ಷ ರೂ.ಗಳಂತೆ ಉದ್ಯಾನವನಗಳ ನಿರ್ವಹಣೆ ಕೈಗೊಳ್ಳಲಾಗುವುದು. ಎರಡು ಸಾಂಸ್ಥಿಕ ಮತ್ತು ಸಮುದಾಯ ಕುಡಿವ ನೀರಿನ ಘಟಕಗಳ ತಪಾಸಣೆಗೆ ಆಯ್ಕೆ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಜನನಿಬೀಡ ಉದ್ಯಾನವನಗಳಲ್ಲಿ ಮಕ್ಕಳಿಗೆ ಆಟಿಕೆ ಸಾಮಾನು ಅಳವಡಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಪಿ.ಎಸ್.ಐ ಸಂಜಯ ತಿಪರೆಡ್ಡಿ ಮಾತನಾಡಿ, ಪೊಲೀಸ್ ಠಾಣೆಯ ಆವರಣದಲ್ಲಿ ಒಣಗಿದ್ದ ಗಿಡಗಳನ್ನು ತೆರವುಗೊಳಿಸಿ ಹೊಸದಾಗಿ ಸಸಿಗಳನ್ನು ನೆಡುವ ಕಾರ್ಯ ಮಾಡಲಾಗಿದೆ. ಠಾಣೆಯ ಆವರಣದಲ್ಲಿ ಹಸಿರೀಕರಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ಹಸಿರು ತೋರಣ ಗೆಳೆಯರ ಬಳಗದ ಬಿ.ಎಚ್.ಬಳಬಟ್ಟಿ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಬಳಗದ ಸಂಚಾಲಕ ಮಹಾಬಳೇಶ ಗಡೇದ, ಸದಸ್ಯೆ ಸಂಗಮ್ಮ ದೇವರಳ್ಳಿ,ರವಿ ಗೂಳಿ ಮಾತನಾಡಿದರು.
ಪುರಸಭೆ ಸದಸ್ಯೆ ಸಹನಾ ಬಡಿಗೇರ, ಭಾರತಿ ಪಾಟೀಲ, ಬಳಗದ ಸದಸ್ಯರಾದ ಬಿ.ಎಸ್.ಮೇಟಿ, ನಾಗಭೂಷಣ ನಾವದಗಿ, ವಿಲಾಸ ದೇಶಪಾಂಡೆ, ಅಶೋಕ ರೇವಡಿ, ಮಲ್ಲಿಕಾರ್ಜುನ ಬಾಗೇವಾಡಿ, ಸುರೇಶ ಕಲಾಲ, ಅಮರೇಶ ಗೂಳಿ ಮೊದಲಾದವರು ಇದ್ದರು.