
ಮುದ್ದೇಬಿಹಾಳ : ಪರೀಕ್ಷೆ ನಡೆಯುವ ಶಿಕ್ಷಣ ಸಂಸ್ಥೆ, ಪ್ರೌಢಶಾಲೆ ಮುಖ್ಯಗುರುಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯ ಮುಖ್ಯ ಅಧೀಕ್ಷಕರಾಗಿ ಅದೇ ಶಾಲೆಯಲ್ಲಿರುವ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವುದಕ್ಕೆ ಶಿಕ್ಷಣ ಇಲಾಖೆ ನಿರ್ಬಂಧ ವಿಧಿಸಿದೆ.ಆದರೆ ಇಲ್ಲಿನ ತಾಲ್ಲೂಕು ಶಿಕ್ಷಣಾಧಿಕಾರಿಗಳು ನಿಯೋಜಿಸಿರುವ ಶಾಲೆಯ ವೇಳಾ ಪಟ್ಟಿಯಲ್ಲಿ ಸ್ಥಳೀಯ ಪರೀಕ್ಷಾ ಕೇಂದ್ರದ ಶಾಲೆಯ ಮುಖ್ಯಶಿಕ್ಷಕರಿಗೆ ಮುಖ್ಯ ಅಧೀಕ್ಷಕರ ಜವಾಬ್ದಾರಿಯನ್ನು ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ತಾಳಿಕೋಟಿಯ ಎರಡು ಪರೀಕ್ಷಾ ಕೇಂದ್ರಗಳು ಹಾಗೂ ಮುದ್ದೇಬಿಹಾಳ ತಾಲ್ಲೂಕಿನ ಮೂರು ಪರೀಕ್ಷಾ ಕೇಂದ್ರಗಳಿಗೆ ಆಯಾ ಶಾಲೆಗಳ ಪ್ರೌಢಶಾಲೆಯ ಮುಖ್ಯಶಿಕ್ಷಕರನ್ನೇ ಮುಖ್ಯ ಅಧೀಕ್ಷಕರನ್ನಾಗಿ ನಿಯೋಜಿಸಿರುವುದು ಇದೀಗ ಬಿಸಿ ಚರ್ಚೆಗೆ ಕಾರಣವಾಗಿದೆ.
ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರು ಪೂರ್ವಭಾವಿ ಸಭೆಯಲ್ಲಿ ಸದರಿ ಮುಖ್ಯಶಿಕ್ಷಕರನ್ನು ಬೇರೆ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸುವಂತೆ ತಿಳಿಸಿದರೂ ಅದಕ್ಕೆ ಬಿಒಒ ಸಾವಳಗಿ ಅವರು, ಪರೀಕ್ಷೆ ಮಂಡಳಿ ನಿರ್ದೇಶಕರಿಂದ ಅನುಮತಿ ಪಡೆಯಲಾಗಿದ್ದು ಈಗ ಬದಲಾಯಿಸುವುದಕ್ಕೆ ಬರುವುದಿಲ್ಲ ಎಂದು ಉತ್ತರಿಸಿದ್ದಾರೆ.
ತಾಲ್ಲೂಕಿನ 19 ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಲ್ಲಿ 14 ಕೇಂದ್ರಗಳ ಜವಾಬ್ದಾರಿ ಬೇರೆ ಶಾಲೆಯ ಮುಖ್ಯಶಿಕ್ಷಕರಿದ್ದರೆ ಈ ಐದು ಕೇಂದ್ರಗಳಿಗೆ ಮಾತ್ರ ಆಯಾ ಶಾಲೆಗಳ ಮುಖ್ಯಶಿಕ್ಷಕರನ್ನೇ ಮುಖ್ಯ ಅಧೀಕ್ಷಕರನ್ನಾಗಿ ನಿಯೋಜಿಸಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಡೆ ಚರ್ಚೆಗೆ ಗ್ರಾಸವಾಗಿದೆ.