ಮುದ್ದೇಬಿಹಾಳ : ವಿಜಯದಶಮಿ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಕರ್ಷಕ ಪಥಸಂಚಲನದಲ್ಲಿ ಸಾಂಘಿಕ ಶಕ್ತಿ ಅನಾವರಣಗೊಂಡಿತು.
ನಗರದ ಹುಡ್ಕೋ ಬಡಾವಣೆ ಬಳಿ ಇರುವ ಗವಿಸಿದ್ದೇಶ್ವರ ಕ್ರೀಡಾ ಮೈದಾನ ದಿಂದ ಪ್ರಾರಂಭಗೊಂಡ ಭವ್ಯ ಪಥಸಂಚಲನ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವೃತ್ತದ ಮೂಲಕ ಸ್ಟೇಟ್ ಬ್ಯಾಂಕ ಮುಖ್ಯ ರಸ್ತೆ, ಕೆ.ಎಸ್.ಆರ್.ಟಿ.ಸಿ ಮುಖ್ಯ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಸಂತ ಕನಕದಾಸ ವೃತ್ತ, ವಾಲ್ಮೀಕಿ ವೃತ್ತ, ಶಾರದಾ ದೇವಸ್ಥಾನ, ಲಕ್ಷ್ಮೀ ವೆಂಕಟೇಶ್ವರ ಗುಡಿ, ಛತ್ರಪತಿ ಶಿವಾಜಿ ವೃತ್ತ, ಸಿದ್ರಾಮೇಶ್ವರ ವೃತ್ತ, ನೇತಾಜಿ ಗಲ್ಲಿ, ಕುಂಬಾರಗಲ್ಲಿ, ದ್ಯಾಮವ್ವನ ಗುಡಿ, ಕಿಲ್ಲಾ ಹೊಸಮಠದ ಮುಖಾಂತರ ಸರಾಫ ಬಜಾರ, ಶ್ರೀದುರ್ಗಾದೇವಿ ಗುಡಿ(ದ್ಯಾಮವ್ವನ ಕಟ್ಟಿ), ಮುಖ್ಯ ಬಜಾರ, ಮಾರ್ಗವಾಗಿ ಬಸವೇಶ್ವರ ವೃತ್ತ ತಲುಪಿ ಸಂಗೋಳ್ಳಿ ರಾಯಣ್ಣ ವೃತ್ತ, ಡಾ ಬಿ ಆರ್ ಅಂಬೇಡ್ಕರ ವೃತ್ತದಿಂದ ಹಾಯ್ದು ಕಾರ್ಯಕ್ರಮದ ಸ್ಥಳ ವ್ಹಿ.ಬಿ.ಸಿ ಪ್ರೌಢಶಾಲೆಯ ಆವರಣಕ್ಕೆ ಆಗಮಿಸಿತು.
ಪಥಸಂಚಲನದ ಮಾರ್ಗದಲ್ಲಿ ಮಹಿಳೆಯರು ರಂಗೋಲಿ , ಹೂವುಗಳಿಂದ ರಸ್ತೆಯನ್ನು ಅಲಂಕರಿಸಿದ್ದರು.ಭಾರತದ ಮಹಾನ ಪುರುಷರ ವೇಷಧಾರಿಗಳು ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿಗೈದರು.
ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ ಸಂಜಯ ತಿಪರಡ್ಡಿ ಸೇರಿದಂತೆ ನೂರಾರು ಪೊಲೀಸರು ಭದ್ರತೆ ಉಸ್ತುವಾರಿ ವಹಿಸಿದ್ದರು.
ಆರ್.ಎಸ್.ಎಸ್.ಸಂಸ್ಥಾಪಕರ ಹೆಗಡೇವಾರ ಹಾಗೂ ಗೊಲ್ವಾಲ್ಕರ್ ಮತ್ತು ಭಾರತಮಾತೆಯ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.