ಮುದ್ದೇಬಿಹಾಳ/ನಾಲತವಾಡ : ಪಟ್ಟಣ ಪಂಚಾಯತ್ ಆಡಳಿತ ನಿರೀಕ್ಷೆಯಂತೆ ಕಾಂಗ್ರೆಸ್ ಸದಸ್ಯರ ಪಾಲಾಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
14 ಸದಸ್ಯರ ಬಲದ ಪಟ್ಟಣ ಪಂಚಾಯತ್‌ನಲ್ಲಿ ಸೋಮವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು.
ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ವಿಜಯಲಕ್ಷ್ಮಿ ಇಲಕಲ್ಲ, ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಗಂಗನಗೌಡರ ಅವರಿಬ್ಬರೇ ನಾಮಪತ್ರ ಸಲ್ಲಿಸಿದ್ದರು. ಇಬ್ಬರ ನಾಮಪತ್ರಗಳು ಕ್ರಮಬದ್ಧವಾಗಿದ್ದು ವಿಜಯಲಕ್ಷ್ಮಿ ಇಲಕಲ್ ಅಧ್ಯಕ್ಷರಾಗಿ, ಬಸವರಾಜ ಗಂಗನಗೌಡರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಹಶೀಲ್ದಾರ್ರು ಆಗಿರುವ ಚುನಾವಣಾಧಿಕಾರಿ ಬಲರಾಮ ಕಟ್ಟಿಮನಿ ಘೋಷಿಸಿದರು.
ಶಾಸಕ ನಾಡಗೌಡರ ಭಾಗಿ:
ಚುನಾವಣಾ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ ವಿಧಾನಸಭೆ, ಲೋಕಸಭೆ ಸದಸ್ಯರಿಗೂ ಪಾಲ್ಗೊಳ್ಳಲು ಅವಕಾಶ ಇರುತ್ತದೆ. ಈ ಹಿನ್ನೆಲೆಯಲ್ಲಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾದರು.
ಅಧ್ಯಕ್ಷ ಸ್ಥಾನಕ್ಕೆ ಎಸ್.ಬಿ.ಗಂಗನಗೌಡರ ಸೂಚಕರಾಗಿ ಸಹಿ ಮಾಡಿದರೆ ಉಪಾಧ್ಯಕ್ಷ ಸ್ಥಾನಕ್ಕೆ ಸಂಗಣ್ಣ ಬಾರಡ್ಡಿ ಸೂಚಕರಾಗಿ ಸಹಿ ಮಾಡಿದರು. ಪಪಂ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಹಿಸಿದರು.
ವಿಜಯೋತ್ಸವದ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ನಾಲತವಾಡ ಪಟ್ಟಣದ ವ್ಯಾಪ್ತಿಯಲ್ಲಿ ಸರ್ಕಾರದಿಂದ ಬಂದಿರುವ ಯೋಜನೆಗಳನ್ನು ಬಡವರಿಗೆ ತಲುಪಿಸುವ ಕೆಲಸ ಮಾಡಬೇಕು. ಒಳ್ಳೆಯ ಆಡಳಿತ ನೀಡುವಂತೆ ಶುಭ ಹಾರೈಸಿದರು.
ಇದನ್ನೂ ಓದಿ: ಶರೀಫ್ ಅಜ್ಜರ ಹೋಲುವ ಗಣೇಶ ಮೂರ್ತಿ ಪ್ರತಿಷ್ಠಾಪನೆ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮುಖಂಡರಾದ ಶಂಕರರಾವ ದೇಶಮುಖ, ಗುರುಪ್ರಸಾದ ದೇಶಮುಖ, ರಾಯನಗೌಡ ತಾತರೆಡ್ಡಿ, ಪಟ್ಟಣದ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪೃಥ್ವಿರಾಜ ನಾಡಗೌಡ್ರ ಸೇರಿದಂತೆ ಸದಸ್ಯರು, ಕಾಂಗ್ರೆಸ್ ಮುಖಂಡರು ಇದ್ದರು.