ಕೋಲಾರ: ಮದುವೆಯಾದ ಕೆಲವೇ ಗಂಟೆಗಳಲ್ಲಿ ನವದಂಪತಿಗಳಿಬ್ಬರು ಹೊಡೆದಾಡಿಕೊಂಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ವಧು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರೆ, ವರನ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ಸಂಭವಿಸಿದೆ.
ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕು ಚಂಬರಸನಹಳ್ಳಿ ಗ್ರಾಮದಲ್ಲಿ ಇಂದು ವಧು ಲಿಖಿತಶ್ರೀ ಹಾಗೂ ನವೀನ್ ಅದ್ಧೂರಿಯಾಗಿ ಮದುವೆ ಆಗಿದೆ. ಆದರೆ, ಅದೇನಾಯ್ತೋ ಏನೋ ರೂಮ್ಗೆ ತೆರಳಿದ್ದ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ವಧು ಲಿಖಿತಶ್ರೀ ಸಾವನ್ನಪ್ಪಿದ್ದಾಳೆ.
ಇನ್ನು ಗಂಭೀರವಾಗಿ ಗಾಯಗೊಂಡಿರುವ ವರ ನವೀನ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ರವಾನಿಸಲಾಗಿದೆ.
ಆದರೆ ಯಾವ ಕಾರಣಕ್ಕೆ ಜೀವ ಹೋಗುವಾಗೆ ನವದಂಪತಿ ಹೊಡೆದುಕೊಂಡರು ಎನ್ನುವುದು ತಿಳಿದುಬಂದಿಲ್ಲ. ಸದ್ಯ ವಿಷಯ ತಿಳಿದು ಸ್ಥಳಕ್ಕೆ ಅಂಡರ್ ಸನ್ ಪೇಟೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಮದುವೆ ಸಂಭ್ರಮದಲ್ಲಿದ್ದ ಎರಡೂ ಕುಟುಂಬಗಳಲ್ಲಿ ಈ ದುರಂತದಿಂದಾಗಿ ಸೂತಕದ ಛಾಯೆ ಆವರಿಸಿದೆ.