ಮುದ್ದೇಬಿಹಾಳ : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.98 ಅಂಕ ಪಡೆದ ವಿದ್ಯಾರ್ಥಿಗಳಿಗೆ ನಮ್ಮ ವಿದ್ಯಾಸಂಸ್ಥೆಯಿಂದ ಎರಡು ವರ್ಷದವರೆಗೆ ವಸತಿಯೊಂದಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಮೀತರೆಡ್ಡಿ ಪಾಟೀಲ ಹೇಳಿದರು.
ತಾಲ್ಲೂಕು ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2025ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಶೇ.90ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಳೆದ ವರ್ಷ ನೀಟ್‌ನಲ್ಲಿ 172 ಮಡಿಕಲ್ ಸೀಟು ಕೊಡುವ ವಾಗ್ದಾನವನ್ನು ಈಡೇರಿಸಿದ್ದೇವು. ಈ ಬಾರಿ 170 ಮೆಡಿಕಲ್ ಸೀಟು ದೊರೆಯುವ ಸಾಧ್ಯತೆ ಇದೆ. ಪ್ರತಿಭಾವಂತ ವಿದ್ಯಾರ್ಥಿಗಳಗೆ ಶಿಷ್ಯವೇತನವನ್ನು ಕಳೆದ 25 ವರ್ಷಗಳಿಂದ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಪಾಟೀಲರು ನೀಡುತ್ತಲೇ ಬಂದಿದ್ದಾರೆ. ಈ ಮುಂಚೆ ಪ್ರಚಾರ ಮಾಡಿಕೊಂಡಿರಲಿಲ್ಲ. ಈಗ ಹೇಳಬೇಕಾದ ಅನಿವಾರ್ಯತೆ ಇದ್ದು ಸಾರ್ವತ್ರಿಕವಾಗಿ ಈ ಮಾಹಿತಿ ನೀಡುತ್ತಿದ್ದೇವೆ ಎಂದರು.
ಮುದೇನೂರ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಮುಂದೆ ಗುರಿ ಇರಲಿ ಹಿಂದೆ ಗುರು ಇದ್ದೇ ಇರುತ್ತಾನೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಕ್ಸಫರ್ಡ್ ಪಾಟೀಲ್ಸ್ ಸಂಸ್ಥೆ ಗುರುವಿನ ಸ್ಥಾನದಲ್ಲಿದ್ದು ತಂದೆ ತಾಯಿ ಕಷ್ಟವನ್ನು ವ್ಯರ್ಥ ಮಾಡದೇ ಪರಿಶ್ರಮದಿಂದ ಓದಿ ಕೀರ್ತಿವಂತರಾಗಬೇಕು ಎಂದರು.
ಮಾಜಿ ಸೈನಿಕ ನಾಗಲಿಂಗಯ್ಯ ಮಠ, ಶಿಕ್ಷಕ ಸಂಗಮೇಶ ಹೂಗಾರ ಮಾತನಾಡಿದರು. ಮುಖ್ಯಶಿಕ್ಷಕರಾದ ಇಸ್ಮಾಯಿಲ್ ಮನಿಯಾರ್, ರೇವಣಸಿದ್ದಪ್ಪ ಮುರಾಳ, ರಾಜಶೇಖರ ಹಿರೇಮಠ, ಮಹಾಂತೇಶ ಬಿರಾದಾರ, ಆನಂದ ನಾವಿ ಇದ್ದರು. ಪಿಸಿಎಂಬಿಯಲ್ಲಿ ಶೇ.90ಕ್ಕೂ ಅಧಿಕ ಅಂಕ ಪಡೆದ 550 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.