ನವದೆಹಲಿ: ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ಟಿಕೆಟ್ (Channapattana by election) ಕಾವು ಏರುತ್ತಿದ್ದು, ಇದೇ ವಿಚಾರವಾಗಿ ಶುಕ್ರವಾರ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ನಿಯೋಗ ವರಿಷ್ಠರನ್ನು ಭೇಟಿ ಮಾಡಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ಈ ವೇಳೆ ಉಪ ಚುನಾವಣೆ ಟಿಕೆಟ್ ಆಕಾಂಕ್ಷಿ ಸಿ.ಪಿ.ಯೋಗೇಶ್ವರ್ ಅವರು ಬಿಎಸ್ಪಿ ಅಥವಾ ಬೇರೆ ಪಕ್ಷ ಸೇರುವ ಸಾಧ್ಯತೆಯನ್ನು ರಾಜ್ಯದ ನಾಯಕರು ತಳ್ಳಿಹಾಕಿದ್ದಾರೆ. ಅವರು ಬಿಜೆಪಿಯಲ್ಲೇ ಉಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಶಾಸಕರಾದ ಅರವಿಂದ್ ಬೆಲ್ಲದ್, ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿ ಸಿ.ಪಿ. ಯೋಗೇಶ್ವರ್ ಅವರನ್ನೊಳಗೊಂಡ ನಿಯೋಗ ಜೆ.ಪಿ.ನಡ್ಡಾ ಹಾಗೂ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ ಉಪಚುನಾವಣೆ ಕುರಿತು ಚರ್ಚಿಸಿತು.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಆರ್.ಅಶೋಕ್ ಮಾತನಾಡಿ, ಗುರುವಾರ ರಾತ್ರಿ ಚನ್ನಪಟ್ಟಣ ಉಪಚುನಾವಣೆ ಕುರಿತು ಸುದೀರ್ಘ ಚರ್ಚೆಯಾಗಿದೆ. ಶುಕ್ರವಾರ ಬಿ.ಎಲ್. ಸಂತೋಷ್ ಮತ್ತು ನಡ್ಡಾ ಅವರೊಂದಿಗೂ ಮಾತುಕತೆ ನಡೆಸಿದ್ದೇವೆ. ಟಿಕೆಟ್ ಬಗ್ಗೆ ಎನ್‌ಡಿಎ ನಾಯಕರು ನಿರ್ಧಾರ ಮಾಡುತ್ತಾರೆ ಎಂದರು.
ಇದೇ ವೇಳೆ ಯೋಗೇಶ್ವರ್ ಬಿಎಸ್ಪಿ ಅಥವಾ ಬೇರೆ ಪಕ್ಷ ಸೇರಿ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆಂಬ ಸುದ್ದಿಗಳ ಕುರಿತು ಪ್ರತಿಕ್ರಿಯಿಸಿದ ಅವರು ಅಂಥ ಸಾಧ್ಯತೆಗಳನ್ನು ತಳ್ಳಿಹಾಕಿದರು. ಯೋಗೇಶ್ವರ್ ಅವರು ಬೇರೆ ಪಕ್ಷಕ್ಕೆ ಸೇರ್ಪಡೆಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಊಹಾಪೋಹ. ಅವರು ಬಿಜೆಪಿಯಲ್ಲೇ ಇರಲಿದ್ದಾರೆ. (Channapattana by election)
ಟಿಕೆಟ್ ವಿಚಾರವಾಗಿ ಜೆಡಿಎಸ್ ವರಿಷ್ಠ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ನಮ್ಮ
ವರಿಷ್ಠರು ಸೇರಿ ನಿರ್ಧಾರ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Death news: ಮಾಜಿ ಸಚಿವ ಶ್ರೀನಿವಾಸ್ ಇನ್ನಿಲ್ಲ
ಡಿಕೆಶಿಗೆ ಟಾಂಗ್
ಇದೇ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಟಾಂಗ್ ನೀಡಿದ ಅಶೋಕ್, ಅವರು ಆಚನ್ನಪಟ್ಟಣಕ್ಕೆ ಹೋಗಿ ಜನರ ಕಿವಿ ಮೇಲೆ ಹೂವಿಡಲು ಸಾಧ್ಯವಿಲ್ಲ. ಕ್ಷೇತ್ರದ ಜನರು ಜಾಣರಿದ್ದಾರೆ. ಡಿ.ಕೆ.ಶಿವಕುಮಾರ್ ವಿಸಿಟಿಂಗ್ ಡಾಕ್ಟರ್ ಇದ್ದಂತೆ. ಚುನಾವಣೆ ಇದ್ದಾಗ ಮಾತ್ರ ಕ್ಷೇತ್ರಕ್ಕೆ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.