ಮುದ್ದೇಬಿಹಾಳ : ಮತಕ್ಷೇತ್ರದ ಶಾಂತಿಯುತ ವಾತಾವರಣವನ್ನು ಕದಡುವ ಕಾರ್ಯಕ್ಕೆ ಮುಂದಾಗುವುದು ಹಿರಿಯ ರಾಜಕಾರಣಿಯಾಗಿರುವ ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರಿಗೆ ಶೋಭೆ ತರುವುದಿಲ್ಲ ಎಂದು ಎಪಿಎಂಸಿ ಸದಸ್ಯ ವಾಯ್.ಎಚ್.ವಿಜಯಕರ್ ಹೇಳಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾಡಗೌಡರು ಕಳೆದ ಮೂವ್ವತ್ತು ವರ್ಷಗಳಲ್ಲಿ ಸಚಿವರಾಗಿದ್ದಾರೆ, ದೆಹಲಿ ಪ್ರತಿನಿಧಿಗಳಾಗಿದ್ದಾರೆ,ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಅವರ ಬಗ್ಗೆ ಮಾಜಿ ಶಾಸಕರು ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಈ ಹಿಂದೆ ಹುಡ್ಕೋದಲ್ಲಿ ನಿವೇಶನ ಖರೀದಿಯಾಗದ ಸಮಯದಲ್ಲಿ ಹೆಚ್ಚು ಸೈಟ್ ಕೊಂಡವರಿಗೆ ರಿಯಾಯಿತಿ ನೀಡುವುದಾಗಿ ತಿಳಿಸಿದ್ದರು.ಅದರಂತೆ ನಾಡಗೌಡರು ಹೆಚ್ಚಿಗೆ ಸೈಟ್ ಖರೀದಿಸಿದ್ದಾರೆ. ಅದರಲ್ಲಿ ತಪ್ಪು ಹುಡುಕುವಂತದ್ದೇನಿದೆ ಎಂದ ವಿಜಯಕರ್, ಮಾಜಿ ಶಾಸಕ ನಡಹಳ್ಳಿಯವರು ಪರ್ಸೆಂಟೇಜ್ ಪಡೆದು ನಿರ್ಮಿಸಿದ ಸಿಸಿ ರಸ್ತೆಗಳೆಲ್ಲ ಬಿರುಕು ಬಿಟ್ಟಿವೆ.ಅಭಿವೃದ್ಧಿ ಎಂದರೆ ಕೇವಲ ಸಿಸಿ ರಸ್ತೆ ಅಲ್ಲ.ಹಿಂದಿನ ಸಿಪಿಐ ಯಾರ ಮನೆಯ ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದರು ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಮಾತನಾಡಿ, ಮತಕ್ಷೇತ್ರದಲ್ಲಿ ಒಂದೂವರೆ ವರ್ಷದ ಅವಧಿಯಲ್ಲಿ ಶಾಸಕ ನಾಡಗೌಡರು, ಲೋಕೋಪಯೋಗಿ ಇಲಾಖೆಗೆ 115.8 ಕೋಟಿ ರೂ., ಸಣ್ಣ ನೀರಾವರಿಗೆ 15.75 ಕೋಟಿ., ಮುದ್ದೇಬಿಹಾಳ, ನಾಲತವಾಡ ಹಾಗೂ ತಾಳಿಕೋಟಿ ಪಟ್ಟಣಗಳ ಯುಜಿಡಿಗಾಗಿ ಅಮೃತ 2.0 ಯೋಜನೆಗಾಗಿ 132.8ಕೋಟಿ ರೂ., ಮುದ್ದೇಬಿಹಾಳ ಮತಕ್ಷೇತ್ರದ ಪ್ರೌಢಶಾಲೆಗಳಿಗಾಗಿ ಒಂದು ಕೋಟಿ,,ಮುಖ್ಯಮಂತ್ರಿ ವಿಶೇಷ ಅನುದಾನ ಯೋಜನೆಯಡಿ 25 ಕೋಟಿ., ರಾಜೀವ ಗಾಂಧಿ ವಸತಿ ಯೋಜನೆ ಅಡಿ 49 ಕೋಟಿ, ತಾಳಿಕೋಟಿ ಹಾಗೂ ನಾಲತವಾಡದಲ್ಲಿ ರೈತಸಂಪರ್ಕ ಕೇಂದ್ರಕ್ಕೆ 4ಕೋಟಿ ರೂ., ರಸ್ತೆಗಾಗಿ ಸಿಎಂ ವಿಶೇಷ ಅನುದಾನ 50 ಕೋಟಿ, ಮುದ್ದೇಬಿಹಾಳ, ತಾಳಿಕೋಟಿ,ನಾಲತವಾಡದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ, ಸಣ್ಣ ನೀರಾವರಿ ಇಲಾಖೆಯಿಂದ 1.12 ಕೋಟಿ ರೂ., ರೂ.ಬಿಡುಗಡೆ ಆಗಿದೆ.
ಈ ಎಲ್ಲ ಯೋಜನೆಗಳು ನಾಡಗೌಡರ ಅವಧಿಯಲ್ಲಿ ಚಾಲ್ತಿಯಲ್ಲಿರುವಂತಹದ್ದಾಗಿವೆ. ಮಾಜಿ ಶಾಸಕ ನಡಹಳ್ಳಿಯವರು ಆರೋಪ ಮಾಡುವ ಮುನ್ನ ಯೋಚಿಸಿ ಮಾತನಾಡುವುದನ್ನು ಕಲಿತುಕೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಕಾಂಗ್ರೆಸ್ ಮುಖಂಡ ಕಾಮರಾಜ ಬಿರಾದಾರ ಮಾತನಾಡಿದರು.ಮುಖಂಡರಾದ ಸುರೇಶಗೌಡ ಪಾಟೀಲ್ ಇಂಗಳಗೇರಿ, ಅಬ್ದುಲಗಫೂರ ಮಕಾನದಾರ, ಬಾಪುಗೌಡ ಪೀರಾಪೂರ, ಗುತ್ತಿಗೆದಾರ ಯಲ್ಲಪ್ಪ ಚಲವಾದಿ, ಪ್ರಭುರಾಜ ಕಲ್ಬುರ್ಗಿ, ಸಂಗಣ್ಣ ನಾಲತವಾಡ, ತಿಪ್ಪಣ್ಣ ಗೋನಾಳ, ಶ್ರೀಕಾಂತ ಚಲವಾದಿ, ರಾಜು ರಾಯಗೊಂಡ ಮತ್ತಿತರರು ಇದ್ದರು.
ಅನುದಾನ ಬಿಡುಗಡೆಯ ನಿಖರ ಅಂಕಿ ಸಂಖ್ಯೆ ; ಮುಖಂಡರ ಅಸ್ಪಷ್ಟತೆ
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಅವರು, ಮುದ್ದೇಬಿಹಾಳ ಮತಕ್ಷೇತ್ರಕ್ಕೆ 350 ಕೋಟಿ ರೂ. ಅನುದಾನ ಶಾಸಕ ನಾಡಗೌಡರು ಶಾಸಕರಾದ ಒಂದೂವರೆ ವರ್ಷದ ಅವಧಿಯಲ್ಲಿ ಬಿಡುಗಡೆಯಾಗಿದೆ ಎಂದು ಹೇಳಿದರೆ, ಇನ್ನೋರ್ವ ಮುಖಂಡ ವಾಯ್.ಎಚ್.ವಿಜಯಕರ್, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ನಾಡಗೌಡರು 250 ಕೋಟಿಗೂ ಅಧಿಕ ಅನುದಾನ ತಂದಿದ್ದಾರೆ ಎಂದು ಹೇಳುವ ಮೂಲಕ ವಿರೋಧ ಪಕ್ಷದವರ ಆರೋಪಕ್ಕೆ ಸ್ಪಷ್ಟವಾದ ಉತ್ತರವನ್ನು ದಾಖಲೆ ಸಮೇತವಾಗಿ ಮಾಧ್ಯಮದವರಿಗೆ ಒದಗಿಸುವುದಕ್ಕೆ ಆಗಲಿಲ್ಲ.
ಇದನ್ನೂ ಓದಿ: ಇವರೇ ಮುಂದಿನ ಸಿಎಂ ದಿನಪತ್ರಿಕೆಯಲ್ಲಿ ಜಾಹೀರಾತು!