ಮುದ್ದೇಬಿಹಾಳ : ತಾಲ್ಲೂಕಿನ ನಾಲತವಾಡದ ಶ್ರೀ ಅಮರೇಶ್ವರ ಸೀಡ್ಸ್ ಏಜೆನ್ಸಿಯು ಕಳಪೆ ಬಿತ್ತನೆ ಬೀಜಗಳನ್ನು ವಿತರಿಸಿದ್ದ ಕಾರಣ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಸದರಿ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಯುವಜನ ಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಕೃಷಿ ಇಲಾಖೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವ ಕೃಷಿ ಅಧಿಕಾರಿಗಳು, ಜಂಟಿ ಕೃಷಿ ನಿರ್ದೇಶಕರ ವಿರುದ್ಧ ತನಿಖೆ ನಡೆಸಬೇಕು.ನ್ಯಾಯಾಲಯದಲ್ಲಿ ಪ್ರಕರಣ ಇದ್ದರೂ ರಾಜ್ಯಾದ್ಯಂತ ಈ ಏಜೆನ್ಸಿಯಿಂದ ಬೀಜ ವಿತರಣೆಗೆ ಆದೇಶ ಕೊಟ್ಟಿರುವುದನ್ನು ತನಿಖೆ ನಡೆಸಬೇಕು.ಅಲ್ಲಿಯವರೆಗೆ ಈ ಏಜೆನ್ಸಿಯ ಬಳಿ ಇರುವ ಬಿತ್ತನೆ ಬೀಜವನ್ನು ವಶಕ್ಕೆ ಪಡೆದುಕೊಳ್ಳಬೇಕು.ನ್ಯಾಯಾಲಯದ ಪ್ರಕರಣ ಇತ್ಯರ್ಥ ಆಗುವರೆಗೂ ಅಮರೇಶ್ವರ ಸೀಡ್ಸ್ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅಲ್ಲದೇ ಕಳೆದ ವರ್ಷ ತೊಗರಿ ಬೀಜಗಳನ್ನು ಕಳಪೆ ಗುಣಮಟ್ಟದಲ್ಲಿ ವಿತರಿಸಿರುವ ಶಂಕೆ ರೈತರಿಗೆ ಇದ್ದು ಅದನ್ನು ತನಿಖೆಗೆ ಒಳಪಡಿಸಬೇಕು.ಬೀಜ ಹಂಚಿಕೆ ಅಕ್ರಮದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಡಿ.5 ರಂದು ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.