ಮುದ್ದೇಬಿಹಾಳ : ಬೆಲೆಯ ಅನಿಶ್ಚಿತತೆಯಲ್ಲಿಯೇ ಒದ್ದಾಡುವ ಬೆಳೆ ಈರುಳ್ಳಿಗೆ ಏಕಾಏಕಿ ದರ ಕುಸಿತದ ಪರಿಣಾಮ ಬಿತ್ತಿದ ಖರ್ಚು ವೆಚ್ಚವನ್ನು ಸರಿದೂಗಿಸಲಾಗದೇ ಬೆಳೆದ ಈರುಳ್ಳಿಯನ್ನು ನೆಲಸಮ ಮಾಡಿದ ಘಟನೆ ತಾಲ್ಲೂಕಿನ ರೂಢಗಿ ಗ್ರಾಮದಲ್ಲಿ ಈರುಳ್ಳಿ ಬೆಳೆಗಾರರೊಬ್ಬರು ಮಾಡಿದ್ದಾರೆ.
ರೂಢಗಿ ಗ್ರಾಮದ ಈರುಳ್ಳಿ ಬೆಳೆಗಾರ ಬಸವರಾಜ ಈಳಗೇರ ಅವರ 6 ಎಕರೆಯಲ್ಲಿ ಬೆಳೆಯಲಾಗಿದ್ದ ಈರುಳ್ಳಿ ಬೆಳೆಗೆ ಸರಿಯಾದ ಬೆಲೆ ಸಿಗದೇ ಬೆಳೆಯಲು ಹಾಕಿದ ಬಂಡವಾಳವೂ ಬಾರದ್ದರಿಂದ ಹೊಲದ ಬದುವಿನಲ್ಲೇ ಹಾಕುವ ಮೂಲಕ ಈರುಳ್ಳಿ ಅವರ ಕಣ್ಣಲ್ಲಿ ಕಣ್ಣೀರು ತರಿಸಿದೆ.
ಈ ಕುರಿತು ಮಾತನಾಡಿದ ರೈತ ಬಸವರಾಜ ಈಳಗೇರ ಅವರು, ಆರು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೇವು. ಒಳ್ಳೆಯ ಫಸಲು ಬಂದಿದೆ ಎಂದು ಮಾರಾಟ ಮಾಡಲು ಹೋದರೆ ಕ್ವಿಂಟಾಲ್‌ಗೆ 300-400 ರೂ.ಗೆ ಕೇಳುತ್ತಿದ್ದಾರೆ. ದೂರ ಹುಬ್ಬಳ್ಳಿ, ಬೆಂಗಳೂರು, ಬಾಗಲಕೋಟೆಗೆ ಲಾರಿ ಬಾಡಿಗೆ, ಆಳುಗಳ ಕೂಲಿ, ಈರುಳ್ಳಿ ತುಂಬುವ ಚೀಲಗಳು, ಹಮಾಲರಿಗೆ ಕೊಡುವ ಕೂಲಿ ಎಲ್ಲವೂ ಸೇರಿದರೆ ಬೆಳೆಗೆ ಮಾಡಿರುವ ಖರ್ಚು ಸೇರಿ ನಷ್ಟವೇ ಆಗುವುದನ್ನು ಮನಗಂಡು ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದರು.
ಒಮ್ಮೆ ಲಾರಿ ಬಾಡಿಗೆ ಮಾಡಿಕೊಂಡು ಮಾರಾಟಕ್ಕೆ ತಗೆದುಕೊಂಡು ಹೋದ ವೇಳೆ ನನ್ನ ಜೇಬಿನಿಂದಲೇ 400 ರೂ. ಕೈ ಬಿಟ್ಟವು. ಆದರೆ ಲಾಭ ಮಾತ್ರ ದೊರೆಯಲಿಲ್ಲ. ಹೀಗಾಗಿ ಹೊಲದಲ್ಲಿ ಬೆಳೆದಿದ್ದ ಸುಮಾರು 500 ಕ್ವಿಂಟಾಲ್ ಈರುಳ್ಳಿ ನೆಲಸಮ ಮಾಡಿದ್ದೇನೆ ಎಂದು ಹೇಳಿದರು.
ಯುವ ಮುಖಂಡ ಕಿರಣ ಹಿರೇಗೌಡರ ಮಾತನಾಡಿ, ಈ ಭಾಗದ ಮುದ್ದೇಬಿಹಾಳ, ಬ.ಬಾಗೇವಾಡಿ, ಕೊಲ್ಹಾರ, ಕೂಡಗಿ ಸುತ್ತಮುತ್ತಲಿನ ಗ್ರಾಮದ ರೈತರು ಈರುಳ್ಳಿ ಬೆಳೆದಿದ್ದು ಒಳ್ಳೆಯ ಫಸಲು ಬಂದಿದೆ. ಆದರೆ ಅದಕ್ಕೆ ಸರಿಯಾದ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ಹಲವು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುತ್ತದೆ. ಈರುಳ್ಳಿ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಈ ಭಾಗದ ರೈತರು ಈರುಳ್ಳಿ ಬೆಳೆಯಲು ಮಾಡಿದ ಖರ್ಚಿ ತಗೆಯಲು ಪರದಾಡುತ್ತಿದ್ದು ಅವರ ಕಣ್ಣಲ್ಲಿ ನೀರು ತರಿಸುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಅವರ ನೆರವಿಗೆ ಬರಬೇಕು ಎಂಬ ಆಗ್ರಹ ರೈತರಿಂದ ಕೇಳಿ ಬಂದಿವೆ.