ಮುದ್ದೇಬಿಹಾಳ : ಸಿಡಿಲು ಬಡಿದು ರೈತನೋರ್ವ ಮೃತಪಟ್ಟಿರುವ ಘಟನೆ ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ರೈತ ಮಲ್ಲಪ್ಪ ಗುರುಶಾಂತಪ್ಪ ತಾಳಿಕೋಟಿ(47) ಹೊಲಕ್ಕೆ ಹೋದಾಗ ಈ ದುರ್ಘಟನೆ ಸಂಭವಿಸಿದೆ. ಹೊಲದಲ್ಲಿದ್ದ ಹುಣಸೆ ಮರದ ಕೆಳಗಡೆ ಆಶ್ರಯ ಪಡೆದುಕೊಂಡಾಗ ಸಿಡಿಲು ಬಡಿದು ರೈತ ಸ್ಥಳದಲ್ಲೇ ಅಸುನೀಗಿದ್ದಾನೆ.
ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ, ನೇಬಗೇರಿ, ಗೆದ್ದಲಮರಿ, ಶಿರೋಳ, ಮುದ್ನಾಳ, ಮುದ್ದೇಬಿಹಾಳ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭಾರೀ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು.
ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದ ಇಳಿಜಾರು ಪ್ರದೇಶದಲ್ಲಿ ಮಳೆ ನೀರು ಸಂಗ್ರಹಗೊಂಡು ಮುಂದೆ ಹರಿದು ಹೋಗದೇ ಕೆಲಕಾಲ ಹೊಂಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಖ್ಯರಸ್ತೆ ಹಾಗೂ ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಯಿತು. ತೀವ್ರ ಸೆಖೆಯಿಂದ ಬಳಲುತ್ತಿದ್ದ ಜನತೆಗೆ ಈ ಮಳೆ ಆಹ್ಲಾದಕರ ವಾತಾವರಣ ಸೃಷ್ಟಿಸಿಕೊಟ್ಟಿದೆ.