ಮುದ್ದೇಬಿಹಾಳ : ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ರಾಜ್ಯಪಾಲರ ನೋಟೀಸ್ ಕೊಟ್ಡಿರುವ ಕ್ರಮ ಪ್ರಜಾಪ್ರಭುತ್ವಕ್ಕೆ ಅಪಮಾನ ಎಂದು ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಕಿಡಿ ಕಾರಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕದ ರಾಜ್ಯಪಾಲರು ಇದುವರೆವಿಗೂ ಯಾವ ಗೊಂದಲಕ್ಕೂ ಸಿಕ್ಕಿರಲಿಲ್ಲ. ತಮಿಳುನಾಡು, ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಇಲ್ಲಿ ರಾಜ್ಯಪಾಲರುಗಳು ಗೊಂದಲವನ್ನೇ ಸೃಷ್ಟಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರವನ್ನು ಕೆಳಗಿಳಿಸುವ ಪಿತೂರಿ ಕೇಂದ್ರದಿಂದಲೇ ಆರಂಭವಾಗಿದೆ. ಮುಡಾ ಬಗ್ಗೆ ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶ ಮಾಡಿ ನ್ಯಾಯಾಧೀಶರು ಆಯ್ಕೆಯಾಗಿದ್ದಾರೆ.
ಈ ಮಧ್ಯೆ ರಾಜ್ಯಪಾಲರ ನೋಟೀಸ್ ಅರ್ಥಹೀನ. ರಾಜಭವನ ರಾಜಕೀಯ ಭವನ ಆಗಬಾರದು. ಕರ್ನಾಟಕದ ರಾಜ್ಯಪಾಲರ ಬಗ್ಗೆ ಬಹಳ ಗೌರವವಿದೆ. ಅವರು ಈ ರೀತಿ ಗೊಂದಲಕ್ಕೆ ಸಿಕ್ಕಿರುವುದು ರಾಜಕೀಯ ಒತ್ತಡದಿಂದ ಎಂಬುದು ತಿಳಿದು ಬರುತ್ತದೆ ಎಂದು ಹೇಳಿದ್ದಾರೆ.
ರಾಜ್ಯಪಾಲರು ಸಿಎಂಗೆ ನೋಟಿಸ್ ಕೊಡುವುದರ ಹಿಂದೆ ಬಿಜೆಪಿ,ಜೆಡಿಎಸ್ ಪಕ್ಷದ ನಾಯಕರ ಪಿತೂರಿ ಇದೆ.ಸಂವಿಧಾನ ವಿರೋಧಿ ರಾಜ್ಯಪಾಲರ ಈ ನಿಲುವನ್ನು ವಿರೋಧಿಸುವ ಜೊತೆಗೆ ಬಿಜೆಪಿ ಜೆಡಿಎಸ್ ನ ಕುತಂತ್ರದ ಕುರಿತು ಹೋರಾಟ ಜಿಲ್ಲಾ ಕೇಂದ್ರದಲ್ಲಿ ಆ. 6 ರಂದು ಪ್ರತಿಭಟನೆ ಹಮ್ಮಿಕೊಂಡಿದ್ದು ಇದರಲ್ಲಿ ಪಕ್ಷದ ಅಭಿಮಾನಿಗಳು, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅಭಿಮಾನಿಗಳು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.