ಮಂಗಳೂರು: ರಿಕ್ಷಾ ಚಲಾಯಿಸುತ್ತಿದ್ದ ವೇಳೆಯೇ ಚಾಲಕ ಹೃದಯಾಘಾತದಿಂದ (Heart attack) ಸಾವನ್ನಪ್ಪಿದ್ದಾನೆ. ಈ ವೇಳೆ ಚಾಲಕನಿಲ್ಲದೆ ಮುಂದೆ ಚಲಿಸಿದ ರಿಕ್ಷಾವು ಆಟೋ ಪಾರ್ಕಿನ ಮತ್ತೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದು ನಿಂತ ಪರಿಣಾಮ ಪ್ರಯಾಣಿಕ ಮಹಿಳೆಯರಿಬ್ಬರು ಪವಾಡ ಸದೃಶ ಪಾರಾದ ಘಟನೆ ಕೋಟೆಕಾರಿನಲ್ಲಿ ಸಂಭವಿಸಿದೆ.
ಉಳ್ಳಾಲ ಧರ್ಮನಗರದ ನಿವಾಸಿ ಅಬ್ದುಲ್ ಮಜೀದ್ (44) ಹೃದಯಾಘಾತದಿಂದ (Heart attack) ಮೃತಪಟ್ಟ ರಿಕ್ಷಾ ಚಾಲಕ ಎಂದು ಗುರುತಿಸಲಾಗಿದೆ.
Join Our Telegram: https://t.me/dcgkannada
ಮಜೀದ್ ಮಂಗಳವಾರ ಮಧ್ಯಾಹ್ನ 12 ಗಂಟೆಯ ವೇಳೆ ಧರ್ಮನಗರದಿಂದ ಸಂಬಂಧಿಕರಾದ ಮಹಿಳೆಯರಿಬ್ಬರನ್ನು ತನ್ನ ಆಟೋ ರಿಕ್ಷಾದಲ್ಲಿ ಕುಳ್ಳಿರಿಸಿ ಒಂಭತ್ತುಕೆರೆ, ಸೋಮೇಶ್ವರ ಮಾರ್ಗವಾಗಿ ಕೋಟೆಕಾರು ಬೀರಿಗೆ ತೆರಳುತ್ತಿದ್ದ ವೇಳೆ ಕೋಟೆಕಾರು ಹೆದ್ದಾರಿ ಬಳಿ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ.
ಚಾಲಕನಿಲ್ಲದೆ ಮುಂದೆ ಚಲಿಸಿದ ರಿಕ್ಷಾವು ಅದೃಷ್ಟವಶಾತ್ ಅಲ್ಲೇ ಇದ್ದ ಆಟೋ ಪಾರ್ಕಿನಲ್ಲಿ ನಿಂತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದು ನಿಂತಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಪ್ರಯಾಣಿಕ ಮಹಿಳೆಯರಲ್ಲಿ ಓರ್ವರು ಅನಾರೋಗ್ಯದಿಂದ ಬಳಲುತ್ತಿದ್ದು, ಆಕೆಯನ್ನು ವೈದ್ಯರ ಕ್ಲಿನಿಕ್ ಗೆ ಬಿಡಲು ಮಜೀದ್ ತೆರಳಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Crime story: ದಾಂಪತ್ಯದಲ್ಲಿ ವಿರಸ.. ಪತ್ನಿ ಕೊಲೆಯಲ್ಲಿ ಅಂತ್ಯ..!
ಮೃತ ಮಜೀದ್ ಅವರು ಶ್ರಮ ಜೀವಿಯಾಗಿದ್ದು, ಹಗಲಿರುಳು ರಿಕ್ಷಾ ಚಲಾಯಿಸಿ ಸಂಪಾದನೆ ಮಾಡಿ ಕುಟುಂಬಕ್ಕೆ ಆಧಾರವಾಗಿದ್ದರು. ಮೃತರು ಪತ್ನಿ, ಒಂದು ಗಂಡು, ಮತ್ತೊಂದು ಹೆಣ್ಣು ಮಗುವನ್ನು ಅಗಲಿದ್ದಾರೆ.
ಈ ಕುರಿತು ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.