ಮುದ್ದೇಬಿಹಾಳ : 40 ವರ್ಷಗಳ ಅವಧಿಯಲ್ಲಿ ಈ ಹಿಂದಿನ ಆಡಳಿತ ಮಂಡಳಿಯವರು ರೈತರಿಗೆ ಕೊಟ್ಟಿದ್ದ ಸಾಲದ ಪ್ರಮಾಣಕ್ಕಿಂತಲೂ ಅದರ ದುಪ್ಪಟ್ಟು ಸಂಖ್ಯೆಯ ರೈತರಿಗೆ ನಾವು ಅಧಿಕಾರ ವಹಿಸಿಕೊಂಡ ನಾಲ್ಕೂವರೆ ವರ್ಷದ ಅವಧಿಯಲ್ಲಿ ಸಾಲ ವಿತರಣೆ ಮಾಡಿದ್ದೇವೆ ಎಂದು ಬಸರಕೋಡ ವಿವಿಧೋದ್ಧೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಹೇಮರೆಡ್ಡಿ ಬ.ಮೇಟಿ ಹೇಳಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ತಾಲ್ಲೂಕಿನ ಬಸರಕೋಡ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಿಂದ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 49ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಅಧಿಕಾರ ವಹಿಸಿಕೊಂಡು ಮಾತು ಕೊಟ್ಟಂತೆ ರೈತರಿಗೆ ರಸಗೊಬ್ಬರ, ಬೀಜ ಹಾಗೂ ಕೀಟನಾಶಕ ಸ್ಥಳೀಯವಾಗಿ ದೊರೆಯಬೇಕು ಎಂಬ ಉದ್ದೇಶದಿಂದ ರಸಗೊಬ್ಬರ ಮಳಿಗೆ ತೆರೆಯಲಾಗಿದ್ದು ಒಂದೇ ವರ್ಷದಲ್ಲಿ 1.22 ಕೋಟಿ ರೂಪಾಯಿ ಬೀಜ, ಗೊಬ್ಬರ, ಕೀಟನಾಶಕ ಖರೀದಿಸಿದ್ದು 92.26 ಲಕ್ಷ ರೂಪಾಯಿ ಗಳಷ್ಟು ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟವಾಗಿದೆ ಎಂದು ತಿಳಿಸಿದರು.
ಮುಂಬರುವ ವರ್ಷದಲ್ಲಿ ಈ ಭಾಗದ ರೈತರಿಗೆ ದ್ರಾಕ್ಷಿ ಸಂಸ್ಕರಣೆಗೆ ಕೋಲ್ಡ್ ಸ್ಟೋರೇಜ್ ತೆರೆಯುವ ಉದ್ದೇಶ ಇಟ್ಟುಕೊಂಡಿದ್ದು ಬಸರಕೋಡದ ಸಂಘಕ್ಕೆ ಸ್ವಂತ ಕಟ್ಟಡವನ್ನು ನಿರ್ಮಿಸಿ ಮುಂದಿನ ವರ್ಷದಲ್ಲಿ ರೈತರ ಸಭೆಯನ್ನು ಅಲ್ಲಿಯೇ ನಡೆಸುವುದಾಗಿ ತಿಳಿಸಿದರು.
ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ರವಿ ಗುರಿಕಾರ, ಪವಾಡ ಬಸವೇಶ್ವರ ಸಹಕಾರಿ ಪತ್ತಿನ ಸಂಘದ ಉಪಾಧ್ಯಕ್ಷ ಡಿ.ಬಿ.ಬೇಲಾಳ, ಪಬ ಸಂಸ್ಥೆಯ ಅಧ್ಯಕ್ಷ ಕೆ.ವಾಯ್.ಬಿರಾದಾರ, ಶರಣ ಸೋಮನಾಳದ ಮಹದೇವಯ್ಯ ಶಾಸ್ತ್ರೀಗಳು ಮಾತನಾಡಿದರು.
ಸಂಘದ ಉಪಾಧ್ಯಕ್ಷ ಬಾಬು ಸೂಳಿಭಾವಿ, ನಿರ್ದೇಶಕರಾದ ಸಿಂಧೂಬಲ್ಲಾಳ ನಾಡಗೌಡ, ಸುನೀಲ ಸೂಳಿಭಾವಿ, ಸೋಮಪ್ಪ ಮೇಟಿ, ಬಸವರಾಜ ಪಾಟೀಲ್, ಲಕ್ಕಪ್ಪ ಸೋಮನಾಳ, ಶಾಂತಪ್ಪ ಸಂಕನಾಳ, ಮಡಿವಾಳಪ್ಪ ತಳವಾರ, ಪಾರ್ವತಿ ಸಾಲಿಮಠ, ಸಿದ್ದಮ್ಮ ಬಿರಾದಾರ, ಯಲ್ಲಪ್ಪ ಚಲವಾದಿ, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಎ.ಎಸ್.ಸಾಲಿಮಠ, ಮಾಣಿಕ ಸಗರಿ, ಪ್ರಭಾರ ಸಿಇಒ ಬಸನಗೌಡ ಕೊಣ್ಣೂರ ಮೊದಲಾದವರು ಇದ್ದರು.ಪ್ರಕಾಶ ಗೋಂಧಳೆ ನಿರೂಪಿಸಿದರು.
ಹಿಂದಿನ ಆಡಳಿತ ಮಂಡಳಿಯ ವಿರುದ್ಧ ವಾಗ್ದಾಳಿ
ಸಂಘದಲ್ಲಿ ಎಫ್.ಡಿ ಇಟ್ಟಿರುವವರಿಗೆ ಹಣ ಮರಳಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ಹಿಂದಿನ ಆಡಳಿತ ಮಂಡಳಿಯವರು, ಸಿಇಒ ಈವರೆಗೂ ಆ ದಾಖಲೆಗಳನ್ನು ಸಂಘಕ್ಕೆ ಒಪ್ಪಿಸಿಲ್ಲ. ಹೀಗಾಗಿ ಜನರಿಗೆ ಅವರು ಇಟ್ಟಿರುವ ಹಣ ಕೊಡಲು ಆಗುತ್ತಿಲ್ಲ. ನಿಮ್ಮ ಹಣ ಎಲ್ಲೂ ಹೋಗಿಲ್ಲ ಬ್ಯಾಂಕಿನಲ್ಲಿ ಜಮೆ ಇದೆ. ಆದರೆ ಹಿಂದಿನ ಆಡಳಿತ ಮಂಡಳಿಯವರು ದಾಖಲೆಗಳನ್ನು ಕೊಟ್ಟಿರುವುದಾಗಿ ಜನರೆದುರಿಗೆ ತಪ್ಪು ಮಾಹಿತಿ ನೀಡುತ್ತಾ ಹೋಗುತ್ತಿದ್ದಾರೆ. ಪ್ರತಿವರ್ಷ ಇದನ್ನು ಹೇಳುವುದಕ್ಕೆ ನಮಗೂ ಬೇಸರವಾಗಿದೆ ಎಂದು ಸಂಘದ ಅಧ್ಯಕ್ಷ ಹೇಮರೆಡ್ಡಿ ಮೇಟಿ ಹಿಂದಿನ ಆಡಳಿತ ಮಂಡಳಿ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: Astrology: ಈ ರಾಶಿಯವರು ಹಣಕಾಶಿನ ವ್ಯವಹಾರದಿಂದ ಇಂದು ದೂರ ಇರುವುದು ಉತ್ತಮ